Monday, November 17, 2014

ನೊಂದ ಜೀವಕ್ಕೆ ನಗುವಿನ ಸಿಂಚನ

ನೀ ಬರುವ ಮೊದಲೇ ತಿಳಿದಿತ್ತು
ಈ ಸಂಜೆ ಎಷ್ಟು ಕರಾಳವೆಂದು
ನಿನ್ನ ಬಳಿ ಬಂದು ನಿಂತಾಗಲಂತೂ
ನನ್ನಲ್ಲಿ ನೂರಾರು ಆಲೋಚನೆಗಳ ಅಲೆ !!

ನಿನ್ನ ಉಸಿರಾಟದ ಗತಿಯನ್ನೊಮ್ಮೆ
ಅವಲೋಕಿಸಿ ನನ್ನಲ್ಲೇ ಅರ್ಥೈಸಿದೆ
ನಿನ್ನಲ್ಲೋ ಸುಳಿದಾಡುತಿದೆ ಪ್ರಶ್ನೆಗಳು
ಉತ್ತರ ಸಿಗಲಾರದಷ್ಟು ಸಂಕಷ್ಟಗಳ ಜೊತೆ !!

ನನಗೇನೂ ಗೊತ್ತಿಲ್ಲ ನಿನಾರೆಂದು
ಬಳಿ ಹೋಗುವ ಧೈರ್ಯವಂತೂ ಇಲ್ಲ
ಒಮ್ಮೆ ಸಂತೈಸಲೂ ಅಪರಿಚಿತರು ನಾವು
ಕೊನೆಗೊಂದು ನಗುವೇ ಬೆಸೆಯಿತು ನಮ್ಮನ್ನಂದು !!

 

Tuesday, August 26, 2014

ಜನುಮ ದಿನದ ಹಾರ್ದಿಕ ಶುಭಾಶಯ

ಇನಿಯನ ನೆನಪಲಿ
ಕಳೆದ ಪ್ರತಿ ನಿಮಿಷಕ್ಕೂ
ಪ್ರೀತಿಯೊಂದೆ ಬೆಸುಗೆ !!

ನೆನಪಿನ ತೋಟದಲಿ
ಬೆಳೆದ ಹಸಿ ಆಸೆಗಳಿಗೆ
ಕಾಯುವಿಕೆಯೊಂದೆ ಉಸಿರು !!

ನಿನ್ನ ಉಸಿರಾಗಿ ಅಡಗಿದ
ಸವಿ ನೆನಪಿನ ಅರಸ ಬಂದು
ಹೊಸ ಹರುಷವ ತರುವಂತಾಗಲಿ !!

ಜನುಮ ದಿನದ ಹಾರ್ದಿಕ ಶುಭಾಶಯ

Tuesday, August 19, 2014

ಏನೆಂದು ಕರೆಯಲಿ

ಮನಸೆಂಬ ಸಾಗರದಲಿ
ಶುಭ್ರ ತೆರೆಯಂತೆ ಅಪ್ಪಳಿಸುವ
ನಿನ್ನ ನೆನಪುಗಳಿಗೇನೆಂದು ಕರೆಯಲಿ ?

ದೇಹವೆಂಬ ಯಂತ್ರದಲಿ
ಕ್ಷಣ ಕ್ಷಣಕೂ ಸದ್ದುಮಾಡುವ
ನಿನ್ನ ಸ್ಪರ್ಶಗಳಿಗೇನೆಂದು ಕರೆಯಲಿ ? 

ಕನಸೆಂಬ ಗೋಪುರದಲ್ಲಿ
ಆಸೆಯೆಂಬ ಹೊನ್ನ ಕಲಶದಂತೆ
ನಿನ್ನ ಬಯಕೆಗಳಿಗೇನೆಂದು ಕರೆಯಲಿ ?

ಜೀವನವೆಂಬ ಬಂಡಿಯಲ್ಲಿ
ಪಯಣಿಗನಂತೆ ಜೊತೆಗಿರುವ
ನಿನ್ನ ಸಂಬಂದಗಳಿಗೇನೆಂದು ಕರೆಯಲಿ ?Tuesday, July 15, 2014

ನನ್ನ ಮಗಳೇ

ಚಿನ್ನಾ, ಆ ನಿನ್ನ ಪುಟ್ಟ ಕಣ್ಣುಗಳೆರಡು
ನನ್ನನೇ ಹುಡುಕುತಿವೆ ಅನಿಸುತಲಿದೆ
ಭಾವನೆಯ ಲೋಕದಲಿ ಪರವಶನಾಗಿ
ನಿನ್ನ ಬಳಿಯೇ ಇರಲು ಮನಸಾಗುತಿದೆ !!

ನಿನ್ನಯ ನೋಟಗಳ ನಡುವಿನ ಮುಗ್ದತೆ
ಜೊತೆಯಲಿ ಮಿನುಗುವ ಹೊಸ ಕಾಂತಿ
ನೋವು ನಲಿವುಗಳ ಅರಿಯದ ಭಾವ
ನಿನ್ನಲೇ ಆಕರ್ಷಿಸಿರುವುದು ನನ್ನ ಜೀವ !!

ಆ ನಿನ್ನಯ ಮಧುರ ನೆನಪುಗಳೇ ವಿನಃ
ಬೇರಾವ ವಿಷಯಗಳು ತಿಳಿಯಲಾರದು
ನೀ ಬಂದು ಕಳೆದಿಲ್ಲಾ ಇನ್ನೂ ತಿಂಗಳು
ಆಗಲೇ ನನ್ನ ಸೆಳೆದಿರುವೆ ನೀ ಮಗಳೇ !!

-- ಶ್ರೀಧರ ಐತಾಳ ದೇವಳಿ

Wednesday, July 2, 2014

ಜನನ

ನಿಮ್ಮೆಲ್ಲರ ಹಾರೈಕೆಯ ಜೊತೆ
ಗುರುಹಿರಿಯರ ಆಶಿರ್ವಾದದ ಬಲದಿ
ಚಿಗುರೊಡೆದಿದೆ ನಮ್ಮಯ ಸಂತಾನದ ಫಲ !!

ಕುಂದಾಪುರದ ಆಸ್ಪತ್ರೆ ಚಿನ್ಮಯ
ನಮಗಂತೂ ಇಂದು ಅವಿಸ್ಮರಣೀಯ
ಅಕ್ಷರದಿ ಬಣ್ಣಿಸಲಾಗದ ಸಂಭ್ರಮದ ವಿಷಯ !!

ಶೋಭಿತಾಳ ಉದರದಿ ಅವತರಣ
ಮುದ್ದು ಕಂದಮ್ಮಳ ಜನನದ  ಸವಿ ಕ್ಷಣ
ನಮ್ಮಯ ಬದುಕಿಗಿದುವೆ ಹೊಸ ಆಶಾಕಿರಣ !!

Dear friends, Today we are blessed with baby girl. Both mother and baby are doing good.... Shoot me with some good Hindu names.

Tuesday, July 1, 2014

ಮಳೆರಾಯ

ಬಾರಯ್ಯ ಬಾರೋ ಮಳೆರಾಯ
ಹಸಿರಾಗಿಸು ನಮ್ಮೂರ ಮಹರಾಯ
ನಿನಗಾಗಿ ಕಾದಿರುವರ ಗೋಳು ಕೇಳಯ್ಯ !!

ಬಿಸಿಲ ಬೇಗೆಗೆ ಕಾದಿದೆ ಧರೆಯು
ಇನ್ನೂ ತುಂಬಲಿಲ್ಲ ನಮ್ಮೂರ ಕೆರೆಯು
ಬೀಳಲಿದೆ ಬಡವನಿಗೆ ಮತ್ತೊಂದು ಬರೆಯು !!

ನಿನ್ನಯ ನಂಬಿ ಮೊದಲ ಮಳೆಗೆ
ಸಂಭ್ರಮದಿ ಬೆವರಸೂಸಿ ಹೊಲವ ಹೂಳಿ
ಬೀಜವ ಬಿತ್ತ ರೈತರ ಪಾಡು ಕೇಳುವವರಾರು !!

ನಿನ್ನನು ಆಶ್ರಯಿಸಿದ ತಂತ್ರಜ್ಞಾನ
ಸ್ತಬ್ದವಾಗಿಹುದು ನಿನ್ನ ಕಾಯುವಿಕೆಯಲ್ಲಿ
ಇನ್ನಾದರು ಮುನಿಸ ತೊರೆದು ಬಾರಯ್ಯ ಮನೆಗೆ !!

ಕುಡಿಕೆ ನೀರಿಲ್ಲದೆ ಕಂಗಾಲಾಗಿಹರು ಜನ
ಅತಿವೃಷ್ಟಿ ಅನಾವೃಷ್ಟಿ ಬದಿಗೊತ್ತಿ ಸಮವೃಷ್ಟಿ
ತಾರಯ್ಯ ನಮ್ಮೂರ ತಾಯಿ ಭುವಿದೇವಿ ಪಾಲಿಗೆ !!


--ಶ್ರೀಧರ ಐತಾಳ ದೇವಳಿ

Monday, June 9, 2014

ಸಹಧರ್ಮಿಣಿ

ಸಹಧರ್ಮಿಣಿಯ ಸಹವಾಸವಿರಲು
ಸಹಿಸುವೇನು ದೇಹದ ಉಪವಾಸ  !!

ನೀ ಪ್ರೀತಿಯ ಉಣಬಡಿಸುತ
ಸದಾ ನನ್ನ ಜೊತೆಗಿರಲು
ಚಿಂತಿಸಲು ವಿಷಯವೇ ಸಿಗದಾಗಿದೆ !!

ನೀ ಮಮತೆಯ ಪಸರಿಸುತ
ಮನೆಯಲಿ ನಗುತಿರಲು
ಮನಕೆ ಬೇರೇನೂ ಬೇಡವಾಗುತಿದೆ ..!!

ನೀ ಸಹನೆಯ ಮೂರ್ತಿಯಾಗಿ
ಕಷ್ಟಗಳ ಪರಿಹರಿಸುತಿರಲು
ಜೀವನಕ್ಕೆ ಸಂತೋಷವೇ ತುಂಬಲಿದೆ !!

ಸಹಧರ್ಮಿಣಿಯ ಸಹವಾಸವಿರಲು
ಸಹಿಸುವೇನು ದೇಹದ ಉಪವಾಸ ....

Wednesday, June 4, 2014

ಸಾರ್ಥಕ

ಬಡತನವೇ ಸಾಕೆಮೆಗೆ
ಮೂರು ಹೊತ್ತು ಊಟಕ್ಕಿರಲು ...
ಮನೆ ಮಂದಿ ಜೊತೆಗೆ ಕೂಡಿರಲು ...
ಕಿತ್ತಾಡಲು ನಮಗೆ ಆಸ್ತಿಪಾಸ್ತಿ ಇರದಿರಲು ...

ಸಿರಿತನವು ಬೇಕೆಮಗೆ
ಮೂರು ಬಗೆಯ ಊಟತಿನ್ನಲು ..
ಮನೆಯ ಮೇಲೊಂದು ಮನೆಯಿಡಲು   ...  
ಮನದ ಇಚ್ಚೆಯನು ಬೇಕೆಂದಾಗ ಪಡೆಯಲು ..

ಜಾಣತನ ಕೊಡುಯನಗೆ
ಮೂರು ಲೋಕವ ಗೆದ್ದುಬರಲು ...
ಮನೆಯ ಕೀರ್ತಿಯ ಎತ್ತಿಹಿಡಿಯಲು ...
ಮಾನವ ಜನ್ಮವನು ಸಾರ್ಥಕ ಗೊಳಿಸಲು ...

--ಶ್ರೀಧರ ಐತಾಳ ದೇವಳಿ

Tuesday, June 3, 2014

ನೆನಪಿದೆಯಾ

ನೆನಪಿದೆಯಾ ಗೆಳತಿ
ನಾನಂದು ಬಿಗಿದಪ್ಪಿ ಮುದ್ದಿಸಿದ ಕ್ಷಣವ ?

ಶುಭ್ರ ಸುಕೋಮಲೆಯಾದ ನೀನು
ಅಂದು ಮುಸ್ಸಂಜೆಯ ತಂಗಾಳಿಯಲಿ
ಸೂರ್ಯನ ಕಾಂತಿಯನ್ನು ಮಬ್ಬಾಗಿಸಿ
ಬೆಳದಿಂಗಳ ಬೆಳಕನ್ನು ಮರೆಯಾಗಿಸಿ
ಗೆಳೆಯನ ಪುಟ್ಟ ಹೃದಯದಿ ಪ್ರೀತಿಯ
ಸ್ವಾಗತಿಸುವಂತೆ ಹೊಳೆಯುತ್ತಿದ್ದೆ ಅಲ್ಲಿ  !!

ನಿನ್ನ ಮಧುರ ಮಾತಿಗೆ ಪುಳಕಿತನಾಗಿ
ನನ್ನೇ ನಾನು ಮರೆತು ಸೋತುಹೋಗಿ
ನಿನ್ನನೊಮ್ಮೆ ನಾ ಬಾಹುವಿನಲಿ ಬಂದಿಸಲು
ಹಲವು ದೇವರ ಹರಕೆಹೊತ್ತು ಕಾಯುತಿರಲು 
ಅದೇನೋ ಮಿಂಚಿನ ಸಂಚಲನ ನನ್ನೊಳಗೆ
ತಿಳಿಯದೆ ನನ್ನನು ನಿನ್ನ ಬಳಿ ಕರೆತಂದಿತ್ತು  !!

ಕೆಂಡದಿಂದ ತೆಗೆದ ಕಬ್ಬಿಣದ ಸಲಾಕೆಯಂತೆ
ದೇಹವು ನಿನ್ನ ಪ್ರೀತಿ ಬಯಸಿ ಕುದಿಯುತಿತ್ತು
ಮುಗ್ಧ ನಗುವ ಬೀರುತ ನಿನ್ನ ಮುಖಾರವಿಂದ
ಹಲವಾರು ಆಸೆಯನ್ನು ನನ್ನಲಿ ಕೆರಳಿಸಿರಲು
ಆಜನ್ಮ ಜೋಡಿ ನಮ್ಮದೆನ್ನುವಂತೆ ನಾ ಬಾಗಿ
ನಿನ್ನ ಬಿಗಿದಪ್ಪಿ ಮುದ್ದಿಸಿ ಚುಂಬಿಸಿ ಬಿಟ್ಟೆನಲ್ಲ !!

ನಿನ್ನ ಸ್ಪರ್ಶದ ಆ ಘಳಿಗೆ ದೇಹದ ರೋಮವನ್ನೆಲ್ಲಾ
ಒಮ್ಮೆಲೇ ಜುಮ್ಮೆಂದು ರೋಮಾಂಚನಗೊಳಿಸಿರಲು
ಅಮ್ಮಾ.. ಅದೆಂತಹಾ ಬಿಸಿ ಉಸಿರೇ ನಿನ್ನದು ಗೆಳತಿ
ನನ್ನ ದೇಹವನ್ನೆಲ್ಲಾ ಒಮ್ಮೆಲೇ ಬೇವರಾಗಿಸಿ ಬಿಟ್ಟಿತು
ಪ್ರಮಾದವಾಗಿದೆ ಎಂದು ನಾ ನೊಂದು ಮರುಗಿರಲು
ನೀ ಒಪ್ಪಿಗೆಯ ನಗುವ ಸೂಚಿಸಿ ಮರೆಯಾಗಿಬಿಟ್ಟೆಯಲ್ಲ !!

ನೆನಪಿದೆಯಾ ಗೆಳತಿ.... ನಿನಗೆ ನೆನಪಿದೆಯಾ ?

--ಶ್ರೀಧರ ಐತಾಳ ದೇವಳಿ

Thursday, May 29, 2014

ಆಮೇಲೆ

ಒಮ್ಮೆ ಬಯಸಿದ್ದು
ನಲ್ಲೆಯ ಪ್ರೀತಿ
ಆಮೇಲೆ ನಂದು ಬರೀ ಪಚೀತಿ.....

ಒಮ್ಮೆ ನೋಡಿದ್ದು
ಹುಡುಗಿಯ ನೋಟ
ಆಮೇಲೆ ತಿಳಿಯಿತು ಅದರ ಹಿಂದಿನ ಕಪಟ ...

ಒಮ್ಮೆ ಕೇಳಿದ್ದೆ
ಆಕೆಯ ಸುಶ್ರಾವ್ಯ ಹಾಡು
ಆಮೇಲೆ ಬೈಗುಳ ಕೇಳೋದೇ ನನ್ನ ಪಾಡು ...

---ಶ್ರೀಧರ ಐತಾಳ ದೇವಳಿ

Tuesday, May 27, 2014

ಭಾಗ್ಯದ ಸಿರಿಬಯಕೆಯ ತೋಟದ ಬಳ್ಳಿಯೇ
ನೀ ಬೆಳೆಯಬೇಕಾಗಿದೆ ಅಲ್ಲಿಯೇ
ನಮ್ಮಯ ನವ ಭಾಗ್ಯದ ಸಿರಿಯೇ
ನೀ ಎಂದು ಕಾಲಿಡುವೆಯೊ ಈ ಭುವಿಗೆ ?

ಕ್ಷಣ ಕ್ಷಣಕೂ ಆ ಸುದಿನವ ಲೆಕ್ಕಿಸುವೆ 
ಮನದಲ್ಲೇ ಏನೇನೋ ಯೋಚಿಸುವೆ
ನಿನ್ನ ಆಗಮನಕ್ಕಾಗಿ ನಾ ಕಾದಿರುವೆ
ಪ್ರೀತಿಯ ಆಲಿಂಗನವ ಬಯಸಿರುವೆ !!

ಅಮ್ಮನ ಉದರದಿ ನೀ ಮಲಗಿರುವೆ
ನವಮಾಸವ ಅಲ್ಲೇ ಕಳೆಯಲಿರುವೆ
ಪ್ರತಿ ನಿಮಿಷವೂ ನಿನ್ನನು ನೆನಪಿಸುವೆ
ಆಕೆಗೆ ಕಚಗುಳಿ ನೀನಲ್ಲಿ ಕೊಡುತಿರುವೆ !!

ಬಯಕೆಯ ತೋಟದ ಬಳ್ಳಿಯೇ
ನೀ ಬೆಳೆಯಬೇಕಾಗಿದೆ ಅಲ್ಲಿಯೇ
ನಮ್ಮಯ ನವ ಭಾಗ್ಯದ ಸಿರಿಯೇ
ನೀ ಎಂದು ಕಾಲಿಡುವೆಯೊ ಈ ಭುವಿಗೆ ?

--ಶ್ರೀಧರ ಐತಾಳ ದೇವಳಿ

Tuesday, May 13, 2014

ಬಂತಪ್ಪೋ ಬಂತು ಚುನಾವಣೆ ಬಂತು

ಬಂತಪ್ಪೋ ಬಂತು ಚುನಾವಣೆ ಬಂತು
ತಂತಪ್ಪೋ ತಂತು ಕಳ್ಳಹಣ ಹೊರ ತಂತು !!

ಕುಮಾರಣ್ಣ ಅತ್ತಾಯಿತು
ಹೆಂಡತಿ ಮಕ್ಕಳು ನಿಂತಾಯಿತು
ಗೌಡ್ರ ಹೆಂಡತಿಯೊಬ್ರೆ ಮರೆತುಹೊದ್ರು !!

ಯೆಡ್ಡಿ ರಾಮುಲು ಬಂದ್ರು
ಬಿಜೆಪಿ ಗುಂಪಿಗೆ ಆನೆಬಲ ತಂದ್ರು
ಮೋದಿ ಹವಾ ಒಂದೇ ಮಾತಾಗಿತು !!

ರಮ್ಯಾ ಗೀತಾ ನಿಂತ್ರು
ಸಿನಿಮಾ ನಾಟಕ ಶುರು ಮಾಡಿದ್ರು
ಉಪ್ಪಿ ಕೂಡ ಬಂದು ಕುಣಿದು ಹೋದರು !!

ಸೋನಿಯಾ ಪಾಪು ಬಂತು
ಪ್ರಧಾನಿ ನಾನೇ ಆಗೋದಂತೂ
ಟಿವಿ ಮುಂದೆ ಮಾತಾಡಿ ಸೋತು ಬಿಡ್ತು !!

ಕೇಜ್ರಿ ಸರ್ಕಸ್ ಮುಗಿತು
ತ್ರತೀಯ ರಂಗ ಮುಳುಗಿತು
ದೇಶಕ್ಕೊಂದು ಹೊಸ ಮೋಡಿ ಬೇಕಾಗಿದೆ !!

ಜನ ನೀವು ಮರಿ ಬೇಡಿ
ಓಟು ಮಾತ್ರ ತಪ್ಪದೆ ಹಾಕಿ ಬಿಡಿ
ದೇಶಕ್ಕೊಂದು ಹೊಸ ನಾಯಕನ್ ತಂದ್ ಬಿಡಿ !!

ನೋಟ
ಹಲವು ನೋಟವ ಕಂಡ ನನಗೆ
ನಿನ್ನ ಒಲವು ತಿಳಿಯಲಾರದೆ

ನಿನ್ನ ನಗುವ ನಯನದ ಹೊಳಪದು
ನಕ್ಕಾಗ ಸುಕೋಮಲ
ನೇತ್ರಗಳನು ಒಮ್ಮೆಲೇ
ನಾಚಿ ಮುದುಡಿಸಿದ
ತಾವರೆಯ ಎಸಳಿನಂತೆ
ಆಕರ್ಷಿಸುತಿವುದು ನನ್ನನೇ !!

ನೀ ನುಡಿದ ಮುತ್ತಿನ ಮಾತದುವೆ
ಸಪ್ತ ಲೋಕದಲ್ಲಿಯೂ
ಕೇಳರಿಯದ ಶಬ್ದಗಳೋ
ಎಂಬಂತೆ ಭಾಸವಾಗಿ
ನಿನ್ನ ಸಾಂಗತ್ಯವನ್ನು
ಮೊದಲು ಪಡೆಯ ಬಯಸಿದೆ !!

ಶ್ರೀಧರ ಐತಾಳ ದೇವಳಿ

Thursday, March 27, 2014

ಏನೆಂದು ಹರಸಲಿಏನೆಂದು ಹರಸಲಿ ಮಡದಿ
ನಿನ್ನ ಈ ಜನುಮ ದಿನಕೆ ?

ಅಪರಿಚಿತರಾಗಿದ್ದೆವು ನಾವು
ಕಳೆದೆರೆಡು ವರುಷದ ಹಿಂದೆ
ಜೋಡಿಸಿತು ಮದುವೆಯೆಂಬ
ಈ ಬಂಧನದ ಕೊಂಡಿಯು !!

ಆಸ್ವಾದಿಸಿರುವೆವು ನಾವು
ಪರಸ್ಪರ ಅನ್ಯೋನ್ಯತೆಯ
ಜೋಡಿಹಕ್ಕಿಗಳಾಗಿ ಇಂದು
ಸಂಸಾರದ ಬಂಡಿಯಲ್ಲಿ !!

ಅನುಭವಿಸುವೆವು ನಾವು
ಪ್ರೀತಿಯೆಂಬ ಈ ಸಾಗರದಲ್ಲಿ
ನಿನ್ನ ಮಧುರ ಸಾಂಗತ್ಯದಲ್ಲಿ
ಉದಯಿಸುವ ಜೀವದಲ್ಲಿ !! 

ಏನೆಂದು ಹರಸಲಿ ಮಡದಿ
ನಿನ್ನ ಈ ಜನುಮ ದಿನಕೆ ?

--ಶ್ರೀಧರ ಐತಾಳ ದೇವಳಿ

Monday, March 10, 2014

ಪ್ರೀತಿಯ ತೋಳಲಿಗೆಳತಿ ನೀನು ಸನಿಹ ಬಂದು
ನನ್ನ ಜೀವಕಾದೆ ಆಸರೆ
ಒಡತಿ ನೀನು ಆಜನ್ಮ ಬಂಧು
ನಿನ್ನ ಮನಕಾದೆ ಕೈಸೆರೆ !!

ಬರುವ ನನ್ನ ಕೋಪ ತಡೆಯಲು
ನಿನ್ನ ನಗುವಿನ ಅಲೆಯು
ಒಡನೆ ಕಂಡು ತಡೆಯದಾದೆನು
ನನ್ನ ನಗುವಿನ ಪಾಳಿಯು !!

ಹಲವು ಚಿಂತೆಯೂ ನನ್ನ ಕಾಡಿ
ಹೆಚ್ಚಿತು ಮನದ ಬೇಗೆಯು
ಒಲವು ನಿನ್ನದು ಬಂತು ನೋಡಿ
ತಣಿದು ತಂದಿತು ಬೆಸುಗೆಯ  !!

ಮರೆತೇ ನಾನು ಚಿಂತೆಯನ್ನೇ
ನಿನ್ನ ಪ್ರೀತಿಯ ಬಲೆಯಲಿ
ಚಿಮ್ಮುವುದು ಹೊಸ ಕಾಂತಿಯನ್ನೇ
ನಿನ್ನ ಕ್ಷಣಿಕ ಮಮತೆಯಲಿ  !!

--ಶ್ರೀಧರ ಐತಾಳ ದೇವಳಿ

Tuesday, March 4, 2014

ಕಾದಿರುವೆ ಚಂದಿರ ನಿನ್ನ ಆಗಮನಕೆ


ಕಾದಿರುವೆ ಚಂದಿರ ನಿನ್ನ ಆಗಮನಕೆ
ಸದಾ ಪೂರ್ಣಿಮೆಯು ನಗು ಮೊಗಕೆ
ತಾರೆಗಳು ಹೊಳೆದಾವು ಕ್ಷಣ ಕ್ಷಣಕೆ 
ಕಾದಿರುವೆ ಚಂದಿರ ನಿನ್ನ ಆಗಮನಕೆ !!

ಮೂಡಣದಿ ನೀ ಮಿನುಗುವೆ ನಾ ಬಲ್ಲೆ
ಮೋಡಗಳ ನೀ ಮೀರಿಸುವೆ ನಾ ಬಲ್ಲೆ
ಮಾಟಗಳ ನೀ ಮಾಡಿರುವೆ ನನ್ನಲ್ಲೇ
ನೋಟಗಳ ನೀ ಕದ್ದಿರುವೆಯೆ ನಿನ್ನಲ್ಲೇ !!

ಆಗಸದಿ ನೋಡುವೆ ನಿನ್ನ ಚಲನವ
ಬೋಗಸೆಗೂ ಸಿಗದ ಸೌಂದರ್ಯವ
ವರ್ಣೆನೆಯ ಬಿಟ್ಟು ಹೇಗೆ ತಡೆಯಲಿ
ಭುವಿಗೆ ನೀ ಬರುವ ದಿನಕೆ ಕಾತುರವ !!

ಕಾದಿರುವೆ ಚಂದಿರ ನಿನ್ನ ಆಗಮನಕೆ !!

---ಶ್ರೀಧರ ಐತಾಳ ದೇವಳಿ

Monday, March 3, 2014

ಮರೆಯದ ವಿಮಾನಯಾನ


ನೀ ಸಾಗುತಿರಲು ಮುಂದೆ ಮುಂದೆ 
ನನಗೇನೋ ದುಗುಡ ಕಾಡುತಲಿತ್ತು
ಸಾಗರದಾಚೆಗೆ ದಾಟುತಿರಲು ಪಯಣ
ಅಧಿಕವಾಗುತಲಿತ್ತು ದುಗುಡದ ಪ್ರಮಾಣ  !!

ಕಿಟಕಿಯ ಕಿಂಡಿಯಲಿ ರಮಣೀಯ ದ್ರಶ್ಯ
ಸುತ್ತಲೂ ಬೆಳ್ಳಿ ಮೋಡಗಳ ಸೌಂದರ್ಯ
ಗಗನಸಖಿಗಳು ಅಲ್ಲಿ ತಂಪನೀಯುತಿದ್ದರು 
ಆದರೂ ನನ್ನ ಬಿಡದು ಅದೇನೋ ದುಗುಡ  !!

ಚಿತ್ರ ವಿಚಿತ್ರವಾದ ಯೋಚನೆಗಳು ಮನದಲ್ಲಿ
ನಿದ್ರೆಯೂ ಬಾರದೆ ಕಾಡಿಸುತಲಿತ್ತು ನನಗಲ್ಲಿ
ಕೊಂಚ ನೆಮ್ಮದಿಯು ಬಂದಿತು ಈ ಚಿಂತೆಯಲ್ಲಿ
ಮಾಡಲು ಮತ್ತೆ ಹೋಗೆನು ಎನ್ನುವ ಶಪಥದಲ್ಲಿ  !!

---ಶ್ರೀಧರ ಐತಾಳ ದೇವಳಿ

Wednesday, February 26, 2014

ಕತ್ತಲೆಯಲ್ಲಿಕತ್ತಲೆಯಲ್ಲಿ ನಿನ್ನ ಬಿಂಬ 
ಹುಡುಕುತಿರುವೆ ನಾ ಹುಂಬ !!

ನಿನ್ನ ಉಸಿರ ಬಿಸಿಗಾಳಿ
ಮರೆಯಾಗಿಸಿದೆ ಈ ತಂಗಾಳಿ
ಮಾತಿನ ಆ ಸವಿಯಿಂಪು
ಇರಲಾರದೆ ಇನ್ನೆಲ್ಲಿಯ ತಂಪು !!

ನೀನಿಲ್ಲದ ಈ ಹೊತ್ತು
ನನಗೆಲ್ಲಿದೆ ಇನ್ನು ಗಮ್ಮತ್ತು
ನನ್ನೊಳಗಿನ ಈ ಮನ
ಬರಸಿಹನು ನಿನಗಾಗಿ ಕವನ !! 

ಮನದಾಳದ ಈ ನೋವು
ಮನದೊಡತಿಯ ನೆನಪಿನ ಕಾವು
ಮನೆಯೊಳಗಿನ ಆ ಮೌನ
ನೆನಪಿಸುತಿದೆ ನಿನ್ನಯ ನಿರ್ಗಮನ !!

ಕತ್ತಲೆಯಲ್ಲಿ ನಿನ್ನ ಬಿಂಬ 
ಹುಡುಕುತಿರುವೆ ನಾ ಹುಂಬ !!

----ಶ್ರೀಧರ ಐತಾಳ ದೇವಳಿ

Monday, February 24, 2014

ಊರ ಸುತ್ತಿ ಬಂದೆ

ಊರ ಸುತ್ತಿ ಬಂದೆ
ನಿಂತೇ ನಿನ್ನ ಮುಂದೆ !!

ದಾರಿ ತಪ್ಪಿ ಹೋಗಿದೆ
ಕಾರಣ ತಿಳಿಯದಾಗಿದೆ
ನಿನ್ನ ನಗುವ ನೋಡಿದೆ
ಮನಸು ನಿನ್ನೇ ತಾ ಬಯಸಿ...

ಊರ ಸುತ್ತಿ ಬಂದೆ
ನಿಂತೇ ನಿನ್ನ ಮುಂದೆ !!

ನಿನ್ನ ಸ್ನೇಹ ಕೋರಿದೆ
ಪ್ರೇಮ ಸಂದೇಶ ಕಳಿಸಿದೆ
ಅಂಗಲಾಚಿ ನಿನ್ನನು ಬೇಡಿದೆ
ಮನಸಾರೆ ನಿನ್ನೇ ನಾ ಸೇರಲು...

ಊರ ಸುತ್ತಿ ಬಂದೆ
ನಿಂತೇ ನಿನ್ನ ಮುಂದೆ !!

ನಿನ್ನ ಪ್ರೀತಿ ತಿಳಿಯದೆ
ಹಲವು ಬಾರಿ ನೊಂದೆನು
ನಿನ್ನ ಒಲವಿನ ಸಿಂಚನದಿ
ನನ್ನ ಇರುವಿಕೆಯನೇ ಮರೆತೆನು...

ಊರ ಸುತ್ತಿ ಬಂದೆ
ನಿಂತೇ ನಿನ್ನ ಮುಂದೆ !!

--ಶ್ರೀಧರ ಐತಾಳ ದೇವಳಿ

Thursday, February 13, 2014

ಭಗ್ನಪ್ರೇಮಿಅಂದು ನಿನ್ನ ನೋಟ ಕಂಡು
ನನ್ನಲ್ಲೇನೋ ಭಾವ ಸಿಂಚನ
ಒಂದೇ ಒಂದು ನಗುವ ಕಂಡು
ನನ್ನೋಳಗೆನೋ ರೋಮಾಂಚನ !!

ಒಮ್ಮೆ ನಿನ್ನ ಸವಿಮಾತ ಕೇಳಿ
ನಾನೇ ಮನಸೋತು ನಿಂತೆನು
ಹೆಮ್ಮೆ ಪಡುತ ನಿನ್ನಲ್ಲಿಗೆ ಬಂದು
ನೋಡಲು ನನ್ನೇ ನಾನು ಮರೆತೆನು !!

ನಲ್ಲೆ ನಿನ್ನ ಪಡೆಯ ಬಯಸಿ
ಹಲವು ವರುಷವೇ ಕಳೆದೆನು
ನಾನೇ ಯಾಕೆ ಸೋಲಲೆಂದು
ಮನದಿ ನೆನೆಯುತ ಕೊರಗುವೆನು !!


---ಶ್ರೀಧರ ಐತಾಳ ದೇವಳಿ

Wednesday, February 12, 2014

ಮಧುರ ಕ್ಷಣನೆನೆಯ ಬಯಸಿದೆ ಆ ಮಧುರ ಕ್ಷಣವ 
ನೀ ಯನ್ನ ವರಿಸಿದ ಸುದಿನವ !!

ಎಲೆಯ ಮೇಲೆ ಬಿದ್ದ ಇಬ್ಬನಿಯಂತೆ
ಹೊಳೆಯುತಲಿದ್ದೆ ನೀನಂದು
ಬಳಿಯಲಿದ್ದ ಇನಿಯನ ಮನ ಗೆದ್ದಾಗಿತ್ತು !!

ಪ್ರೇಮದ ಶಾಖದಿಂದ ಕುದಿಯುತ್ತಿತ್ತು
ನಿನ್ನ ಮನದ ಜ್ವಾಲೆಯು
ಕಣ್ಣಂಚಿನ ಹನಿಯಾಗಿ ಮರೆಯಾಗುತಿತ್ತು !!

ನದಿಯಿಂದ ಹೊರಬಂದ ಮೀನಿನಂತೆ
ಒದ್ದಾಡುತಿದ್ದೆಯೇ ನೀನಂದು
ಹೆತ್ತ ತಂದೆತಾಯಿಯ ತೊರೆಯಬೆಕಾಗಿತ್ತು !!

ಭಾವನೆಯ ಸುಪ್ತ ಸಾಗರದಲಿ ತೇಲುತಿದ್ದ
ಆಲೋಚನೆಯ ಲಹರಿಯು ನಿನ್ನ
ಹಾವ ಭಾವಗಳಲಿ ತುಂಬಿ ತುಳುಕುತಲಿತ್ತು !!

ನೆನೆಯ ಬಯಸಿದೆ ಆ ಮಧುರ ಕ್ಷಣವ ನಾನಿಂದು...

Happy valentines day my dear wifu...

--ಶ್ರೀಧರ ಐತಾಳ ದೇವಳಿ

Monday, February 10, 2014

ನಾನು ನಗುತಲಿದ್ದೆನಗುತಲಿದ್ದೆ ನಾನು ನಗುತಲಿದ್ದೆ
ನೂರಾರು ನೋವುಗಳ ನುಂಗಿ
ಹಲವಾರು ಭಾವನೆಯ ಅಡಗಿಸಿ
ನಿನ್ನ ಮೊಗದಿ ನಗುವ ನೋಡಲು !!

ನನಗೇನು  ತಿಳಿದಿತ್ತು  ಗೆಳತಿ
ನಿನ್ನ ಮನದಲೂ ಕಾಡುತಲಿದ್ದ
ನೂರಾರು ಬಯಕೆಗಳ ಕಗ್ಗೊಲೆ
ಹಲವಾರು ಸಂಕಟಗಳ ಸರಮಾಲೆ !!

ನನಗಾಗಿ ನೀನೂ ನಗುತಲಿದ್ದೆ
ನಿನಗಾಗಿ ನಾನೂ ನಗುತಲಿದ್ದೆ ...

ನೀನು ನೋವ ಮರೆತು ನನ್ನ ನಗಿಸುತಲಿದ್ದೆ
ನಿನ್ನ ನಗುವಲಿ ನಾ ನೋವ ಮರೆಯುತಲಿದ್ದೆ  !!

--ಶ್ರೀಧರ ಐತಾಳ ದೇವಳಿ

Friday, February 7, 2014

ಮೋಡಗಳೇಬಾನಲ್ಲಿ ತೇಲುವ ಮೋಡಗಳೇ
ಕೇಳಿರಿ ನನ್ನ ಕೋರಿಕೆ

ಸೊರಗಿಹಳು ನನ್ನ ಮಡದಿ
ಸೂರ್ಯನ ಬಿಸಿ ತಾಪಕ್ಕೆ 
ಚಲಿಸದಿರಿ ಕೆಲ ಸಮಯ
ನನ್ನಾಕೆ ಮನೆಯ ತಲುಪುತಿರಲು !!

ಬಾನಲ್ಲಿ ತೇಲುವ ಮೋಡಗಳೇ
ಕೇಳಿರಿ ನನ್ನ ಕೋರಿಕೆ

ಮರುಗುವಳು ನನ್ನ ಮಡದಿ
ಅಕಾಲಿಕ ಬದಲಾವಣೆಗೆ
ಸುರಿಯದಿರಿ ಗಾಳಿ ಮಳೆಯ
ನನ್ನಾಕೆ ಮನೆಯ ತಲುಪುತಿರಲು !!

ಬಾನಲ್ಲಿ ತೇಲುವ ಮೋಡಗಳೇ
ಕೇಳಿರಿ ನನ್ನ ಕೋರಿಕೆ

ಕೊರಗಿಹಳು ನನ್ನ ಮಡದಿ
ರಾತ್ರಿಯ ಬಾನ ಕಂಡು
ಮರೆಯಾಗಿಸದಿರಿ ಚಂದಿರನ
ನನ್ನಾಕೆ ಮನೆಯ ಮಹಡಿಯೇರಲು !!


---ಶ್ರೀಧರ ಐತಾಳ ದೇವಳಿ

Thursday, January 30, 2014

ನೀ ನಗುತಿರಲು

ಮೋಡದ ಮರೆಯಲ್ಲಿ ಅಡಗಿದ
ನೀ ನಿಂತಿರಲು
ಅರಳ ಬೇಕಂದೇನಿಲ್ಲ ಚಂದಿರ
ನೀ ನಗುತಿರಲು !!

ಬರೀ ಬೆಳಕಿಲ್ಲದ ರಾತ್ರಿಗಳು
ನೀ ಬರದಿರಲು
ಸುಳಿಯ ಬೇಕಾಗಿಲ್ಲ ತಾರೆಗಳು
ನೀ ಬಂದಿರಲು !!

ಅಮಾವಾಸ್ಯೆಯ ಕತ್ತಲೆಯಲ್ಲೂ
ನೀ ಮಿನುಗುತಿರಲು
ಇರುಳೆ ಇಷ್ಟವಾಗುತಿದೆ ನನಗೆ
ನೀ ಬಳಿಯಿರಲು !!

-- ಶ್ರೀಧರ ಐತಾಳ ದೇವಳಿ

Monday, January 27, 2014

ಆಮಂತ್ರಿಸುವೆವು


ಆಮಂತ್ರಿಸುವೆವು ನಿಮಗೆ
ಮುದ್ದಿನ ಮಗಳ ಮದುವೆಗೆ !!

ಬನ್ನಿರೈ ಬಂಧುಗಳೇ 
ಸಡಗರದಿ ಈ ಕರೆಗೆ
ಕಿರಿಮಗಳ ಮದುವೆಗೆ  !!

ತನ್ನಿರೈ ನವೋಲ್ಲಾಸ
ನಿಮ್ಮಯ ಆಗಮನದಿಂ 
ನಲ್ಮೆಯ ಮದುಮಗಳಿಗೆ !!

ಹರಸಿರೈ ಮನತುಂಬಿ 
ನಮ್ಮ ನವ ದಂಪತಿಗಳಿಗೆ
ಅದುವೆ ನಿಮ್ಮ ಉಡುಗೊರೆ !!

ಮರೆಯದಿರಿ ದಿನವನ್ನು 
ಹುಡುಕದಿರಿ ಕಾರಣವನು 
ತಪ್ಪಿಸಿಕೊಳ್ಳಲು ಆ ಕ್ಷಣಗಳನು !!

ಬಂದೆ ಬರುವಿರಿ ನೀವೆಂದು
ಕಾಯುವೆವು ತುದಿಗಾಲಿನಲಿ
ವಾದಿರಾಜ ಕಲ್ಯಾಣ ಮಂಟಪದಲಿ !!

 -- ಶ್ರೀಮತಿ ಮತ್ತು ಶ್ರೀ ನಾರಾಯಣ ಹೊಳ್ಳ


Thursday, January 23, 2014

ಇದು ಯಾರ ಬಯಕೆ ?ರವಿಯ ಸುಂದರ ರಶ್ಮಿಗೆ
ಅರಳಿ ನಿಂತ ಮಲ್ಲಿಗೆಯು
ಬಳಿಗೆ ಬಂದ ಚಿಟ್ಟೆಯಲಿ
ಬೇಡಿತು ತನ್ನ ಇಂಗಿತವ
ಪರಮಾತ್ಮನ ಪಾದಸೇರುವ  !!

ಬೇಡಿದ ವರವ ಕೊಡುವ
ಜಗದೀಶ್ವರನ ಕೃಪೆಯಿಂದ
ಭಕ್ತನ ಶ್ರದ್ದೆಯ ಸಾಧನವಾಗಿ
ಹೂವ ಬಯಕೆಯು ತೀರಿತು
ದೇವರ ದೇವನ ಶಿರವ ಸೇರಿತು !!

ಪರಮ ಭಕ್ತರಿಗೆ  ಕೊಡಲು
ಹೂವು ಪ್ರಸಾದದ ತಟ್ಟೆಗೆ
ಕ್ಷಣ ಮಾತ್ರದಿ ತೆಗೆಯಲ್ಪಟ್ಟಿತ್ತು 
ಪೂಜಾರಿಯ ಮನವ ಸೆಳೆದ
ಸುಂದರ ತರುಣಿಗದುವೆ ಲಭಿಸಿತು !!

-- ಶ್ರೀಧರ ಐತಾಳ ದೇವಳಿ

Tuesday, January 21, 2014

ಅತೃಪ್ತಿಯೇ
ನಿನ್ನ ಮೊಗದಲಿ
ನಗುವ ನೋಡುತ ನಿಂತೆ
ಮುಚ್ಚದಿರು ನಿನ್ನ ಕಣ್ಣುಗಳನು
ಎಷ್ಟು ನೋಡಿದರೂ ಅತೃಪ್ತಿಯೇ
ಕಾಡುತಿದೆ ಯನ್ನನ !!

ನಿನ್ನ ನಗುವಿನಲಿ
ಮಿನುಗುವ ನಯನದ ಕಾಂತಿ
ಮುದುಡಿದ ತಾವರೆಯನೂ ಒಮ್ಮೆ
ಗಾಳಿ ಬೀಸಿ ಅರಳಿಸಿದಂತೆ
ಭಾಸವಾಗುತಿದೆ ಯನಗೆ !!

ನಲ್ಲೆ ನೀ ನಿಂತಲ್ಲೇ
ನಕ್ಕರೂ ಅದೇನಿದೆ ನಿನ್ನಲ್ಲೇ
ಕಣ್ಣ ಮಿಟುಕಿಸಲು ಮನಸಿಲ್ಲ
ನಿನ್ನನೇ ನೋಡುವ ಆಸೆಯು
ಬರುತಲಿದೆ ನನ್ನಲ್ಲೇ !!

---ಶ್ರೀಧರ ಐತಾಳ ದೇವಳಿ

Thursday, January 16, 2014
ಓ ಕೋಮಲೆ
ನಿನ್ನ ನಯನದ
ಕುಡಿ ನೋಟಕ್ಕೆ
ಹತನಾದ ದುಷ್ಯಂತ ನಾ !!

ಓ ಅಭಲೇ
ನಿನ್ನ ಧೈರ್ಯದ 
ಒಣ ಹಟಕ್ಕೆ
ಬೆರಗಾದ ಮಹಾತ್ಮ ನಾ !!

ಓ ಶ್ಯಾಮಲೆ
ನಿನ್ನ ಸುಂದರ 
ಮೈ ಮಾಟಕ್ಕೆ
ವರನಾದ ಮನ್ಮತ ನಾ  !!

ಓ ನಿರ್ಮಲೆ
ನಿನ್ನ ಮುಗ್ದ
ಮನ ಪುಟಕ್ಕೆ
ದಾಸನಾದ ಕಾಂತ ನಾ !!

ಓ ಚಂಚಲೆ
ನಿನ್ನ ಅಕಾಲಿಕ
ಚಿತ್ತ ಓಟಕ್ಕೆ
ಚಕಿತನಾದ ಪತಿಯೇ ನಾ !!

---ಶ್ರೀಧರ ಐತಾಳ ದೇವಳಿಒಂದಾನೊಂದು ಪ್ರೇಮಕವಿತೆ
ಪ್ರಿಯೇ ನಿನಗಾಗಿ ಬರೆದಿದ್ದೆ
ನಾನೊಂದು "ಪ್ರೇಮಕವಿತೆ"ಯ

ತಾಳೆಗರಿಯ ಮೇಲೊಂದು
ತಾಳಲಾರದ ಮೇಲೊಂದು
ತಾಳ್ಮೆಯರಿತ ಮೇಲೊಂದು
ತಾಳೆ ನೋಡಿ ಮತ್ತೊಂದು !!

ತಾಳೆಗರಿಯ ಮೇಲೆ ಬರೆದಿದ್ದು
ತರುಣನ ತಲೆಯಲ್ಲಿ ಬಂದ
ಆಸೆಗಳ ಚಪಲ !

ತಾಳಲಾರದ ಮೇಲೆ ಬರೆದಿದ್ದು
ಯೌವನದ ಬಿಸಿಯನ್ನು ತಂದ
ಮಾನಸಿಕ ಚಂಚಲ !

ತಾಳ್ಮೆಯರಿತ ಮೇಲೆ ಬರೆದಿದ್ದು
ಮಧ್ಯಮ ವಯಸ್ಸಿನಲ್ಲಿ ಕಂಡ
ಸಾಮಾನ್ಯ ಕುತೂಹಲ !

ತಾಳೆ ನೋಡಿದ ಮೇಲೆ ಬರೆದಿದ್ದು
ಜಾತಕ ಹೊಂದಾಣಿಕೆ ನಂತರದ
ಮದುವೆಯ ಕಂಕಣಬಲ !

ಪ್ರಿಯೇ ನಿನಗಾಗಿ ಬರೆದಿದ್ದೆ
ನಾನೊಂದು "ಪ್ರೇಮಕವಿತೆ"ಯ  !!

---ಶ್ರೀಧರ ಐತಾಳ ದೇವಳಿ

ಸಿಹಿ ಜೇನ ಹನಿನಿನ್ನ ನವಿರಾದ ಮೇಲ್ತುಟಿ
ಅಂಚಿನಲಿ ನೀರಾಗಿ ಕಾದಿದ್ದೆ
ಎಂದು ನನ್ನ ಮಧುರ ಸಿಹಿ
ನಿನ್ನ ಇನಿಯನಿಗೆ ಹಂಚಲೆಂದು
ಅವನಲ್ಲಿ ಆಸೆಯ ವ್ರದ್ದಿಸಲೆಂದು !!

ಅವಸರದಿ ನೀಯನ್ನ ವರಸಿ ಬಿಟ್ಟೆ
ಗೊಂದಲದಿ ನಿನ್ನ ಕರವಸ್ತ್ರಕ್ಕೆ
ನಾ ಸೆರೆಯಾಗಿ ಸೋತು ಬಿಟ್ಟೆ
ನಾನಿರದ ನಿನ್ನ ತುಟಿ ಅಂಚಿಗೆ 
ಬಣ್ಣ ಹಚ್ಚಿ ನನ್ನ ನೀ ಮರೆತು ಬಿಟ್ಟೆ !!

---ಶ್ರೀಧರ ಐತಾಳ ದೇವಳಿ

ಚಿತ್ರಕ್ರಪೆ : ಅಂತರ್ಜಾಲ

( ವರಸಿ = ದ್ರವ ವಸ್ತುವನ್ನ ಆ ಸ್ಥಳದಿಂದ ತೆಗೆಯುವುದು )

Monday, January 13, 2014

ಪ್ರೇಮಪತ್ರ
ನನ್ನ ಒಲುಮೆಯ ಗೆಳತಿಯೇ ಇದ ಕೇಳು
ನಿನಗಾಗಿಯೆ ಬರೆದಿಹೆ ಈ ಸಾಲು
ಒಲವಿನಲಿ
ನಿನ್ನ ಬಯಕೆಯಲಿ
ತೊದಲುತ  ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!

ಹರುಷವ ನೋಡುವೆ ನಿನ್ನೊಳು ಎಂದಿಗೂ 
ನಿಮಿಷವೂ ನಿನ್ನನು ನೆನೆಯುವೆನು
ಜೊತೆಗಿರಲು
ನಿನ್ನ ಬಳಿಯಿರಲು
ಬಯಸುತ ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!

ತಾಯಾಗಿರುವೆ ನೀನಿಂದು ಮಮತೆಯಲಿ
ಮಗುವಾಗುವೆ ನಾನು ಪ್ರೀತಿಯಲಿ
ಮಲಗುತಲಿ
ನಿನ್ನ ಮಡಿಲಿನಲಿ
ಬದುಕಲು ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!

---ಶ್ರೀಧರ ಐತಾಳ ದೇವಳಿ

Thursday, January 9, 2014

ಹೃದಯ
ನನ್ನವಳ ನಗುವಿನಲ್ಲಿ ಮೂಡಿತ್ತು
ಕೆನ್ನೆಯ ಗುಳಿ
ಕೆನ್ನೆಯ ತುಂಬೆಲ್ಲ ಮಿನುಗುತಿತ್ತು
ಕಾಂತಿಯ ಹಾವಳಿ  !!

ನನ್ನಾಕೆಯ ಮಾತಿನಲಿ ತುಂಬಿತ್ತು
ಪ್ರೀತಿಯ ಮಳೆ
ಪ್ರೀತಿಯಲಿ ನನ್ನವಳ ಸೋಲಿಸಿತ್ತು
ಪ್ರೇಮದ ಕಳೆ !!

ನನ್ನರಸಿಯ ದೃಷ್ಟಿಯದು ಸೆಳೆದಿತ್ತು
ನನ್ನಯ ಹೃದಯ
ನನ್ನಲ್ಲಿರುವ ಆಸೆಯನು ಸ್ಪಂದಿಸಿತ್ತು
ನನ್ನವಳ ಹೃದಯ !!

---ಶ್ರೀಧರ ಐತಾಳ ದೇವಳಿ

ವ್ಯತ್ಯಾಸವಿಷ್ಟೇಹಿಂದೆ ಕಷ್ಟಪಟ್ಟು ಬೆವರುಸುರಿಸಿ ದುಡಿದು
ಮನೆಯನ್ನ ಸಾಗಿಸುತ್ತಿದ್ದರು
ಇವಾಗ ಕಷ್ಟಕೊಟ್ಟು ಅವರಿಂದಲೇ ದುಡಿದು
ಮನೆಯಿಂದ ಸಾಗಿಸುತ್ತಿದ್ದಾರೆ...

ಹಿಂದೆ ದೇಹಶ್ರಮವನ್ನ ಮರೆಯಲು ಕುಡಿದು
ಜೀವನವನ್ನು ನಡೆಸುತ್ತಿದ್ದರು
ಇವಾಗ ವಯಸ್ಸಿಗೆ ಮನಸೋಯಿಚ್ಚೆ ಕುಡಿದು
ಜೀವವನ್ನೇ ಕಡೆಗಣಿಸುತ್ತಿದ್ದಾರೆ...

ಹಿಂದೆ ಕಾನೂನು ಇತಿಹಾಸವನ್ನು ಕಲಿತು
ರಾಜಕೀಯಕ್ಕೆ ಬರುತ್ತಿದ್ದರು
ಇವಾಗ ಜನರ ಮನಸ್ತಿತಿಯನ್ನು ಕಲಿತು
ರಾಜಕೀಯ ಮಾಡುತಿದ್ದಾರೆ....

ನೀವೇನಂತೀರಿ ???

--ಶ್ರೀಧರ ಐತಾಳ ದೇವಳಿ

Tuesday, January 7, 2014

ತುಂಟ ಕೈದಿ ಗಂಡ
ನಿನ್ನ ಅಂದಕ್ಕೆ ಸೆರೆಯಾದ
ಗಂಡ ನಾನು !!
                                             ಹೆಜ್ಜೆಯ ಸಮ್ಮಿಲನವೋ
                                             ಗೆಜ್ಜೆಯ ಸವಿ ಸಪ್ಪಳವೊ
                                             ಲಜ್ಜೆಯ ಸಮ್ಮೊಹನವೋ
                                             ಹೆಜ್ಜೇನಿನ ಸಿಹಿ ಸಂತುಲನವೋ !!

ನಿನ್ನ ಸೊಂಟಕ್ಕೆ ಬಲಿಯಾದ
ತುಂಟ ನಾನು !!
                                              ನಡಿಗೆಯ ಮೋಹಕತೆಯೋ
                                              ನಿನ್ನ ಮೇಲಿನ ಮಮತೆಯೋ
                                              ನಿನ್ನಲ್ಲಡಗಿದ ಮಾದಕತೆಯೋ
                                              ಸುರ-ಕನ್ನಿಕೆಯರ ಸಮಾನತೆಯೋ !!

ನಿನ್ನ ಕಂಠಕ್ಕೆ ಬಂದಿಯಾದ
ಕೈದಿ ನಾನು !!
                                                ನಾಟ್ಯದ ಅರಗಿಣಿಯೋ
                                                ಕಾಡುವ ಮೋಹಿನಿಯೋ
                                                ಸೆಳೆಯುವ ಮುದ್ದಿನಮಣಿಯೋ 
                                                ಸೆರೆಹಿಡಿವ ಸಪ್ತ ಸ್ವರ ಮಾಧುರ್ಯವೋ !!ಒಟ್ಟಾರೆ ಅಂದಕ್ಕೆ ಸೆರೆಯಾಗಿ
ಸೊಂಟಕ್ಕೆ ಬಲಿಯಾಗಿ
ಕಂಠಕ್ಕೆ ಬಂದಿಯಾದ
ತುಂಟ ಕೈದಿ ಗಂಡ ನಾನು !!

--ಶ್ರೀಧರ ಐತಾಳ ದೇವಳಿ

Friday, January 3, 2014

ಒಂಟಿತನ
ಚಮತ್ಕಾರ ಏನು ಇಲ್ಲಾ
ನನ್ನದು ಸಹಜತನ
ನಿಮ್ಮೆಲ್ಲರ ನಡುವೆಯೂ ನನಗೆ
ಇನ್ನೂ ಕಾಡುತಿದೆ ಒಂಟಿತನ !!

ಮನೆಯ ಬಾಗಿಲು ತೆಗೆದಾಗ
ಸುತ್ತಲೂ ಕತ್ತಲು
ಮನೆಯಾಕೆ ಊರಲ್ಲಿದ್ದರೆ
ಯಾರಿರುವರು ದೀಪ ಹಚ್ಚಲು !!

ಊಟದ ಕೋಣೆಗೆ ಹೋದಾಗ
ಎಲ್ಲೆಲ್ಲೂ ಬಟ್ಟಲು
ಮನೆಕೆಲೆಸ ಮಾಡದಿದ್ದರೆ
ಆಗುವುದು ಅಡಿಗೆಮನೆ ಬಚ್ಚಲು !!

ಕಸವ ತೆಗೆಯಲು ಹೋದರೆ
ಮನೆತುಂಬಾ ಬಾಟಿಲು
ಹೆಂಡತಿ ತವರಲ್ಲಿದ್ದರೆ
ಗಂಡನಿಗಿದೆ ನೂರಾರು ಸವಾಲು !!

--ಶ್ರೀಧರ ಐತಾಳ ದೇವಳಿ

Thursday, January 2, 2014

ನನ್ನ ನಿನ್ನ ನಡುವೆ
ನಿನ್ನ ನೆನಪೇ ನನ್ನ ಉಸಿರು
ನನ್ನ ಉಸಿರಲಿ ನಿನ್ನ ಹೆಸರು !!

ನನ್ನ ಜೀವದ ಆಸರೆ
ನಿನ್ನ ಪ್ರೀತಿಗೆ ನಾ ಸೆರೆ
ನಿನ್ನ ಸನಿಹವ ಬಯಸುತಿರೆ
ನನ್ನ ವಿರಹವ ನಾ ಮರೆಯುವೆ !!

ನನ್ನ ನೆರಳ ಕಂಡರೆ
ನಿನ್ನ ನೆನಪು ಬರುತಿರೆ 
ನಿನ್ನ ಸ್ಪರ್ಶವ ನೆನೆಯುತಿರೆ
ನನ್ನ ಮನದಲಿ ಏನು ಹರುಷವೇ  !!

ನನ್ನ ಮನೆಯ ಅಪ್ಸರೆ
ನಿನ್ನ ಮನವೇ ನನ್ನ ಹೊರೆ
ನಿನ್ನ ನೆನೆಯಲು ನಾ ಕೂತರೆ
ನನ್ನ ಇರುವಿಕೆಯ ನಾ ಮರೆಯುವೆ !!

ನಿನ್ನ ನೆನಪೇ ನನ್ನ ಉಸಿರು
ನನ್ನ ಉಸಿರಲಿ ನಿನ್ನ ಹೆಸರು 

--ಶ್ರೀಧರ ಐತಾಳ ದೇವಳಿ