Tuesday, November 3, 2015

ಬದುಕು ಜಟಕಾಬಂಡಿ


         ದಿನಕರನ ದಿನಚರಿ ದಿನಕಳೆದಂತೆ ತುಂಬಾ ಬದಲಾಗುತಿತ್ತು, ಸದಾ ಅಮ್ಮನ ಸೆರಗನ್ನು ಹಿಡಿದುಕೊಳ್ಳದಿದ್ದರು ಅವಳ ಆಜ್ಞೆಯನ್ನು ಶಿರಸಾ ಪಾಲಿಸುತಿದ್ದವನು. ಒಮ್ಮೊಮ್ಮೆ ಅಮ್ಮ ಹೇಳಿದಂತೆ ಕುಣಿಯುತಿದ್ದ ತನ್ನ ಸ್ವಂತ ಬುದ್ದಿಯಿಂದ ಯಾವೊಂದು ಕೆಲಸ ಮಾಡಿದವನಲ್ಲ. ಆಕೆಗೂ ಅತಿಯಾದ ಪುತ್ರವಾತ್ಸಲ್ಯ ಮಗನಿಗಾಗಿ ತಾನು ಏನು ಬೇಕಾದರೂ ಮಾಡಲು ಸಿದ್ದಲಿದ್ದಳು. ಮಗನ ವಿಧ್ಯಾಬ್ಯಾಸ ಚೆನ್ನಾಗಿ ಸಾಗುತಿತ್ತು, ಅದಕ್ಕೆ ಬೇಕಾದ ವಾತವರಣ ಸೃಷ್ಟಿ ಮಾಡಿದ ಕೀರ್ತಿ ಆಕೆಗೆ ಸೇರಬೇಕು. ಹೀಗಿರಲು ಜಾನಕಮ್ಮನಿಗೆ ಮಗನಿಂದ ತುಂಬಾ ಕನಸುಗಳು ಸಾಕಾರವಾಗಬೇಕಿತ್ತು, ಅದಕ್ಕಾಗಿ ಮಗನನ್ನು ಯಾವಾಗಲೂ ಹುರಿದುಂಬಿಸುತಿದ್ದಳು. ಮಗನನ್ನು ವಿಜ್ಞಾನಿಯನ್ನಾಗಿ ಮಾಡುವುದು ಅವಳ ಪರಮ ಗುರಿಯಾಗಿತ್ತು. ಅವನ ಅಧ್ಯಯನದಲ್ಲಿ ತುಂಬಾ ಮುತುವರ್ಜಿವಹಿಸಿ ಗಮನಿಸುತ್ತಿದ್ದಳು, ಬೇಕಾದ ಸರಕು ಸೌಲಭ್ಯಗಳನ್ನ ಒದಗಿಸುತಿದ್ದಳು. ಒರೆಗೆಯ ವಿಧ್ಯಾರ್ಥಿಗಳಿಗೆ ನಾಚಿಕೆ ಆಗುವಂತೆ ಅವನ ಅಂಕಗಳು ಬರುತ್ತಿದ್ದವು. ಕಾಲೇಜಿನ ಪ್ರಾಂಶುಪಾಲರಿಗಂತೂ ದಿನಕರ ತುಂಬಾ ಅಚ್ಚುಮೆಚ್ಚು. ಮುಂದೊಂದು ದಿನ ನಮ್ಮ ಕಾಲೇಜಿನ ಕೀರ್ತಿಪತಾಕೆ ಎತ್ತರಕ್ಕೆ ಹಾರಿಸುತ್ತಾನೆ ಎಂದು ಅತೀವ ಬಯಕೆ ಅವರ ಮನದಲ್ಲಿ ಸಾಕಾರಗೊಂಡಿತ್ತು.

ತಂದೆ ಉದ್ಯೋಗದಲ್ಲಿ ದಿನಸಿ ವ್ಯಾಪಾರಿ, ಆಯ ವ್ಯಾಯ ಪಟ್ಟಿ ಮಾಡುವುದನ್ನೇ ಬಿಟ್ಟು ಹಲವು ವರ್ಷಗಳು ಸಂದಿದ್ದವು. ಅಂಗಡಿಯ ಸುತ್ತ ಮುತ್ತ ಸಾಮಾನ್ಯ ದಿನಕೂಲಿ ಮಾಡುವ ಕೆಲಸಗಾರರೆ ತುಂಬಿದ್ದರು. ಅವರ ಬೇಡಿಕೆ ಇದ್ದಿದ್ದು ಬರಿ ನಶ್ಯಾ, ಬೀಡಿ, ಗುಟ್ಕಾ ಅಪ್ಪಿತಪ್ಪಿ ಒಮ್ಮೊಮ್ಮೆ ಬಾಳೆಹಣ್ಣು. ಬಿಟ್ಟರೆ ಬೇರೆ ಏನು ಕೊಳ್ಳಲು ಅವರ ಮನಸ್ಸು ಕೇಳುತ್ತಿರಲಿಲ್ಲ. ಹೀಗಿರಲು ವ್ಯಾಪಾರದಲ್ಲಿ ಲಾಭ ಮಾಡುವುದು ತುಂಬಾ ದೂರದ ಮಾತು. ಪಿತ್ರಾರ್ಜಿತ ಆಸ್ತಿಯಲ್ಲಿ ಕಟ್ಟಿಸಿದ ಕೆಲವು ಮನೆಗಳಿದ್ದವು, ಅದರಿಂದ ಜೇಬು ತುಂಬುವಷ್ಟು ಆದಾಯ ಬರುತ್ತಿತ್ತು. ಅದಕ್ಕೆ ಅಂಗಡಿಯ ಬಗ್ಗೆ ಯಾರೊಬ್ಬರು ತಲೆ ಕೆಡಿಸಿಕೊಂಡಿರಲಿಲ್ಲ. ತಿಂಗಳ ಕೊನೆಗೆ ಬಾಡಿಗೆ ಸಂಗ್ರಹಿಸಿ ಹೆಂಡತಿಗೆ ಕೊಡುವುದೇ ದಿನಕರನ ತಂದೆಯ ಗುರುತರ ಕಾರ್ಯವಾಗಿತ್ತು. ಲಕ್ಷ್ಮೀಪೂಜೆಯ ದಿನವನ್ನು ಬಿಟ್ಟು ಮಗ ಅಥವಾ ಹೆಂಡತಿ ಯಾವೊಂದು ದಿನವೂ ಅಂಗಡಿಯ ಬಳಿ ಬರುತ್ತಿರಲಿಲ್ಲ.  ಅಂಗಡಿಯ ಚಾವಣಿಯಲ್ಲಿ ಗೆಳೆಯರ ದಂಡೇ ಸೇರುತಿತ್ತು. ಅವರೊಂದಿಗೆ ಪುಕ್ಕಟೆ ಹರಟೆ ಬಿಟ್ಟರೆ ಬೇರೆ ಕೆಲಸ ಮಾಡುವ ಜಾಯಮಾನವನ್ನೇ ರೂಡಿಸಿಕೊಂಡಿಲ್ಲ. ನಿಜವಾಗಿ ಹೇಳುವುದಾದರೆ ಗುಂಡಾದಿ ಗುಂಡನಂತೆ ದಿನ ಕಳೆಯುತ್ತಿದ್ದ.  


ಅಮ್ಮನ ಊಹೆ ದಿನಕಳೆದಂತೆ ನಿಜವಾಗ ತೊಡಗಿತು. ದಿನಕರ ಜಾಸ್ತಿ ಸಮಯವನ್ನು ಕಾಲೇಜಿನ ಆವರಣದಲ್ಲೇ ಕಳೆಯ ತೊಡಗಿದ. ಮಗನಿಗೆ ಓದಲು ತುಂಬಾ ಇರುವುದೆಂದು ಭಾವಿಸಿ ಅಮ್ಮನ ತನಿಕೆ ನಡೆಯುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ದಿನಕರ ಜಾಸ್ತಿ ಸಮಯವನ್ನು ತನ್ನ ಗೆಳತಿ ಕಾವ್ಯಳ ಜೊತೆ ಕಳೆಯುತ್ತಿದ್ದ. ಹೀಗಿರಲು ಪರೀಕ್ಷೆಯ ಸಮಯ ಹತ್ತಿರವಾಗತೊಡಗಿತು. ಇಬ್ಬರೂ ಇನ್ನು ಕೆಲವು ದಿನ ಬೇಟಿ ಮಾಡುವುದು ಬೇಡವೆಂದು ಶಪಥ ಮಾಡಿ, ಸಮರಾಭ್ಯಾಸಕ್ಕೆ ಕುಳಿತರು. ನೀರೀಕ್ಷೆಗೂ ಮೀರಿ ಅಂಕಗಳಿಸುತ್ತಿದ್ದ ದಿನಕರ ಈ ಬಾರಿ ಕೇವಲ ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾದ. ಅಮ್ಮನ ಆಸೆಯನ್ನು ದಿಕ್ಕರಿಸಿ ವೈದ್ಯಕೀಯ ಪದವಿಯ  ವಿಷಯವನ್ನು ಆರಿಸಿಕೊಂಡ.  ಆಮ್ಮನ ಹಲವು ವರುಷದ ಆಸೆ ಕಮರಿಹೋಯಿತು. ಮಗನನ್ನು ಇಸ್ರೋ,ನಾಸಾ ದಂತಹ ಸಂಸ್ಥೆಯಲ್ಲಿ ಕಾಣುವುದು ಇನ್ನು ಬರಿ ಕನಸಿಗೆ ಸೀಮಿತವಾಗಿತು.  

ಮಗನ ವಿದ್ಯಾಭ್ಯಾಸಕ್ಕೆ ಮಾಡುತಿದ್ದ ಕರ್ಚು ಈಗ ದ್ವಿಗುಣವಾಗತೊಡಗಿತು, ಮಗನನ್ನು ದೂರದ ಬೆಂಗಳೂರಿಗೆ ಕಳಿಸಿ ಅಮ್ಮನಿಗೆ ದಿನಕಳೆಯುವುದು ತುಂಬಾ ಅಸಹನೀಯವಾಗಿತ್ತು. ಅದಕ್ಕಾಗಿ ಒಮ್ಮೆ ಗಂಡನನ್ನು ಕರೆದು ತನ್ನ ನಿರ್ಧಾರವನ್ನ ಹೇಳತೊಡಗಿದಳು. ಇರುವ ಚರಾಚರ ಆಸ್ತಿಯನ್ನು ಮಾರಿ ಬೆಂಗಳೂರಿಗೆ ಹೋಗಿ ನೆಲೆಸುವುದೆಂದು. ಇದರಿಂದ ಒಮ್ಮೆ ಚಕಿತನಾದ ಪತಿಯು ಏನು ಹೇಳುವುದೆಂದು ತಿಳಿಯದೆ ಸುಮ್ಮನಾದ. ತನ್ನ ಅಂಗಡಿಯ ಸುತ್ತ ಸೇರುವ ಗೆಳೆಯರನ್ನು ಬಿಟ್ಟು ಬರುವುದು ಅವನಿಗೆ ಸುತಾರಾಂ ಇಷ್ಟವಿರಲಿಲ್ಲ, ಆದರೆ ಹೆಂಡತಿಯ ಮುಂದೆ ಬೇಡವೆಂದು ಹೇಳಲು ದೈರ್ಯವಿರದೆ ಸಮ್ಮತಿಯ ನಿರ್ಧಾರ ಹೇಳಿದ. ಇತನ್ಮದ್ಯೇ ದಿನಕರ ಮತ್ತೆ ಕಾವ್ಯ ಒಂದೇ ಕಾಲೇಜಿನಲ್ಲಿ ಸೇರಿ ತಮ್ಮ ಮೊದಲ ವರ್ಷದ ವಿದ್ಯಾಭ್ಯಾಸ ಮುಗಿಸಿದ್ದರು. ರಜೆಗೆಂದು ಊರಿಗೆ ಬಂದ ದಿನಕರ ವಿಷಯ ತಿಳಿದು ಒಮ್ಮೆ ಸ್ತಬ್ದನಾಗಿದ್ದ. ಬೆಂಗಳೂರಿನಲ್ಲಿ ಐಶಾರಾಮಿಯಾಗಿ ಬದುಕುವುದು ಇನ್ನುಮುಂದೆ ಕಷ್ಟವೆಂದು ದಿನಕರ ಮನದಲ್ಲೇ ಲೆಕ್ಕಹಾಕಿದ.

               ಬೆಂಗಳೂರಿಗೆ ಬಂದು ಬಾಡಿಗೆ ಮಾನೆಯಲ್ಲಿ ಸಾಮಾನುಗಳನ್ನು ಸಾಗಿಸಿ ಹೊಸ ಸಂಸಾರ ಹೂಡಿದಂತೆ ಹಾಲು ಒಕ್ಕಿಸಿ ಆಯಿತು. ಮಗನ ಜೊತೆ ಇರುವುದು ಜಾನಕಮ್ಮನಿಗೆ ಖುಷಿಯಾದರೆ, ಪತಿಗೆ ಮನೆಯಲ್ಲಿ ಹೆಂಡತಿಯೊಂದಿಗೆ ಕಾಲಕಳೆಯುವುದು ದೊಡ್ಡ ಸಮಸ್ಯೆಯಂತಿತ್ತು. ಜಾನಕಮ್ಮ ತನ್ನೆಲ್ಲ ಆಸ್ತಿಯ ಹಣವನ್ನು ಬಡ್ಡಿಗೆ ಕೊಟ್ಟು ದಿನಕಳೆಯುತ್ತಿದ್ದಳು. ದಿನಕರನ ವಿದ್ಯಾಭ್ಯಾಸ ಮುಗಿದು ಅದೇ ಕಾಲೇಜಿನಲ್ಲಿ ನೌಕರಿ ಗಿಟ್ಟಿಸಿಕೊಂಡ ಜೊತೆ ಜೊತೆಗೆ ಕಾವ್ಯಳು ಅಲ್ಲೇ ವೃತ್ತಿ ಆರಂಭಿಸಿದಳು. ಇನ್ನು ತಡಮಾಡುವುದರಲ್ಲಿ ಯಾವುದೇ ಪುರುಶಾರ್ಥವಿಲ್ಲ ಎಂದು ದಿನಕರ ಒಳ್ಳೆಯ ಸಂಧರ್ಬ ನೊಡಿ ತನ್ನ ಪ್ರೇಮದ ವಿಷಯವನ್ನು ಮನೆಯಲ್ಲಿ ಪ್ರಸ್ತಾಪಿಸಿದ.

           ಜಾನಕಮ್ಮ ತುಂಬಾ ನೊಂದು ಕುಬ್ಜಳಾದಳು. ಇಲ್ಲಿಯ ತನಕ ದಿನಕರನನನ್ನು ತನ್ನ ಹದ್ದುಬಸ್ತಿನಲ್ಲಿ ಇಟ್ಕೊಂಡಿದ್ದೆ ಅಂದು ಕುಟುಂಬಸ್ಥರಿಗೆಲ್ಲಾ ಹೇಳಿ ಜಂಬ ಕೊಚ್ಚಿಕೊಳ್ಳುತಿದ್ದಳು. ಆದರೆ ದಿನಕರ ತನ್ನೆಲ್ಲಾ ಆಸೆಗೆ ತಿಲಾಂಜಲಿ ಇಟ್ಟಿದ್ದ. ಮದುವೆಗೆ ಒಪ್ಪದಿದ್ದರೆ ತಾನು ಮನೆ ಬಿಡುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದ. ಮಗನಿಗಾಗಿ ಊರು ಬಿಟ್ಟು ಬಂದ ಜಾನಕಮ್ಮ ದಂಪತಿಗೆ ಬಾಡಿಗೆ ಮನೆಯ ಮೇಲ್ಚಾವಣಿ ಕುಸಿದು ಬಿದ್ದಂತೆ ಬಾಸವಾಗಿತ್ತು. ತಮ್ಮೆಲ್ಲ ಆಶಾ ಗೋಪುರವು ನುಚ್ಚು ನೂರಾಗಿತ್ತು, ಕಾವ್ಯ ಬೇರೆ ಸಂಪ್ರದಾಯಕ್ಕೆ ಸೇರಿದ ಹೆಣ್ಣುಮಗಳಾಗಿದ್ದಳು. ಸಾಲದೆಂಬಂತೆ ಅವಳು ನೊಡಲು ಅಷ್ಟೇನೂ ಸ್ಪುರದ್ರೂಪಿಯಾಗಿರಲಿಲ್ಲ. ಕೇವಲ ದಿನಕರನನ್ನು ಬುಟ್ಟಿಗೆ ಹಾಕಿಕೊಂಡು ತನ್ನ ಸಂಸಾರದ ಶಾಂತಿ ಕದಲಿಸಿದಳೆಂದು ಮನದಲ್ಲೇ ಆಕ್ರೋಶಗೊಂಡಳು.

                ಇರುವ ಮಗನನ್ನು ತೊರೆದು ಬದುಕುವುದು ಯಾವ ಖುಷಿಗೆಂದು ಮದುವೆಗೆ ತನ್ನ ಒಪ್ಪಿಗೆ ಸೂಚಿಸಿದಳು. ಕಾವ್ಯ ತುಂಬಾ ಆಗರ್ಭ ಶ್ರೀಮಂತರ ಮಗಳಾಗಿದ್ದಳು, ಅವಳ ಮನ ನೋಯಿಸಲು ದಿನಕರ ಸಿದ್ದನಿರಲಿಲ್ಲ. ಕಾವ್ಯಾಳ ಮನೆಯ ಶಾಸ್ತ್ರ ಸಂಪ್ರದಾಯದಂತೆ ವಿಜ್ರಂಬಣೆಯಾಗಿ ಮದುವೆ ನಡೆಯಿತು. ದಿನಕರ ಸ್ವರ್ಗ ತನ್ನ ಕಪಿ ಮುಷ್ಟಿಯಲ್ಲೇ ಇದೆಯೆಂದು ಸಂಬ್ರಮಿಸುತಿದ್ದ. ಮದುವೆಗೆ ಬಂದ ಜಾನಕಮ್ಮನ ಸಂಬಂದಿಕರು ಮನಸ್ಸಿಗೆ ಚುಚ್ಚುವಂತೆ ಅಲ್ಲೊಂದು ಇಲ್ಲೊಂದು ಮಾತನಾಡುತಿದ್ದರೂ ಜಾನಕಮ್ಮ ಯಾವುದಕ್ಕೂ ಕಿವಿಗೊಡದೆ ಸೊಸೆಯನ್ನು ಮನೆಗೆ ಬರಮಾಡಿಕೊಂಡರು.

            ಹೊಸತರಲ್ಲಿ ಎಲ್ಲವೂ ಸೊಗಸಾಗಿ ಕಂಡವು, ದಿನಕಳೆದಂತೆ ಬೂದಿ ಮುಚ್ಚಿದ ಕೆಂಡದಂತೆ ಕಾಣತೊಡಗಿತು.  ದಿನಕರ ಗಂಡ ಹೆಂಡತಿ ದಿನಾ ಬೆಳಿಗ್ಗೆ ಬೇಗನೆ ಕಾಲೇಜಿಗೆ ಹೋಗುತಿದ್ದರು. ಅವರು ಹೊರಡುವ ಸಲುವಾಗಿ ಜಾನಕಮ್ಮ ಬೇಗನೆ ಎದ್ದು ಅಡಿಗೆ ಮಾಡಬೇಕಿತ್ತು, ಒಮ್ಮೊಮ್ಮೆ ಅವಳಿಗೆ ಆಗದೆ ಕುಸಿದು ಕೂರುತಿದ್ದಳು. ಸೊಸೆ ಒಂದು ದಿನವೂ ಅತ್ತೆಗೆ ಸಹಾಯಕ್ಕೆ ನಿಲ್ಲಲಿಲ್ಲ, ಬದಲಾಗಿ ಕೆಲಸದ ಬಿಡುವಿನಲ್ಲಿ ದಿನಕರನ ಕರೆದುಕೊಂಡು ಊರು ಸುತ್ತುವುದು, ಸಿನಿಮಾ ನೊಡಲು ಹೊಗುವುದನ್ನ ಪ್ರಾರಂಬಿಸಿದಳು. ಜಾನಕಮ್ಮ ಮನದಲ್ಲೇ ಸೊಸೆಯನ್ನು ದ್ವೇಷಿಸಲು ಆರಂಬಿಸಿದ್ದಳು. ಸಾಲದೆಂಬಂತೆ ಸ್ತ್ರೀ ಮಾತ್ಸರ್ಯ ದಿನಕರನು ಹೆಂಡತಿಯೊಂದಿಗೆ ಸಲಿಗೆಯಿಂದಿರುವುದು ಅಮ್ಮನಿಗೆ ಸಹಿಸಲು ಕಷ್ಟವಾಗಿತ್ತು. ಅವನು ಅವಳಿಗೆ ಕೊಡಿಸುವ ಪ್ರತಿಯೊಂದರಲ್ಲೂ ತನಗೊಂದು ಪಾಲು ಬೇಕೆಂದು ಬಯಸಿ ಕೊನೆಗೆ ಏನು ಸಿಗದಿದ್ದಾಗ ಮನದಲ್ಲೇ ಸೊಸೆಯನ್ನು ಶಪಿಸುತಿದ್ದಳು.


ಆಗಾಗ ಅತ್ತೆ ಸೊಸೆಯರ ಮದ್ಯೆ ಶೀತಲ ಸಮರ ನಡೆಯುತಿತ್ತು. ಒಮ್ಮೊಮ್ಮೆ ಇಬ್ಬರ ಹಠ ತಾರಕಕ್ಕೆ ಏರುತಿತ್ತು, ಇದರಿಂದ ಮನೆಯಲ್ಲಿ ಕೊಂಚವೂ ನೆಮ್ಮದಿ ನೆಲಸಿರಲಿಲ್ಲ. ಮಗ ಸೊಸೆ ಕೆಲಸಕ್ಕೆ ಹೋದ ತಕ್ಷಣ ಜಾನಕಮ್ಮ ಗಂಡನಲ್ಲಿ ತನ್ನ ನೋವನ್ನ ಹೇಳಿಕೊಳ್ಳುತಿದ್ದಳು. ಪತಿಯಂತೆ ಮೌನವಾಗಿ ಎಲ್ಲದನ್ನು ಸಹಿಸಲು ಆಕೆಗೆ ಆಗುತ್ತಿರಲಿಲ್ಲ. ಇತ್ತಕಡೆ ಕಾವ್ಯ ರಾತ್ರಿಯಿಡಿ ಅತ್ತು ಗಂಡನನ್ನ ತನ್ನತ್ತ ಅನುಕಂಪ ಸಂಪಾದಿಸುತ್ತಿದ್ದಳು. ಹಳ್ಳಿಯಲ್ಲಿ ಸ್ವತಂತ್ರ ಹಕ್ಕಿಯಂತೆ ಬದುಕಿದ ಜಾನಕಮ್ಮ ಬೆಂಗಳೂರಿನಲ್ಲಿ ಬಂದಿಯಾದ ಹಕ್ಕಿಯಾಗಿದ್ದಳು. ಊರಿಗೆ ಪುನಃ  ಹೋಗಲು ಆಕೆಯ ಮನಸ್ಸಾಕ್ಷಿ ಒಪ್ಪುತ್ತಿರಲಿಲ್ಲ. ಸಂಬಂದಿಕರಿಗೆ ಯಾವ ವಿಷಯವನ್ನು ಹೇಳಿರಲಿಲ್ಲ. ಕೊನೆಗೊಂದು ದಿನ ಆಕೆಯ ಸಹನೆಯ ಕಟ್ಟೆ ಒಡೆದು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು. ದಿನಾ ಸಾಯುತ್ತೇನೆ ಎಂದು ಧಮಕಿ ಹಾಕುತಿದ್ದ ಜಾನಕಮ್ಮ ಆ ದಿನ ಇಹ ಲೋಕದ ಯಾತ್ರೆಯ ಮುಗಿಸಲು ಮುಂದಾಗಿದ್ದಳು. ಹೆಂಡತಿಯ ಚಲನವಲನ ಗಮನಿಸಿದ್ದ ಪತಿಯು ಕೂಡಲೇ ಚಿಕಿತ್ಸೆ ಕೊಡಿಸಿ ಆಕೆಯ ಬದುಕಿಸಿಕೊಂಡ.

ಕಾವ್ಯಳು ಆತ್ತೆಯ ನಡುವಳಿಕೆಗೆ ನೊಂದು ತಾನು ಮನೆಯಲ್ಲಿ ಮಾತನಾಡುವುದನ್ನೇ ನಿಲ್ಲಿಸಿ ಬಿಟ್ಟಳು. ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ, ಸದಾ ಬುಸುಗುಡುವ ಹಾವಿನಂತೆ ಮುಖ ಗಂಟಾಗಿರುತಿತ್ತು. ಕಾವ್ಯ ಇತ್ತೀಚೆಗಂತೂ ಸದಾ ತನ್ನ ಕೋಣೆಯಲ್ಲಿ ಕಾಲ ಕಳೆಯುತಿದ್ದಳು. ಒಮ್ಮೊಮ್ಮೆ ಎಷ್ಟೋ ಹೊತ್ತಿಗೆ ಗಂಡಾ ಹೆಂಡತಿ ಮನೆಗೆ ಬರುತ್ತಿದ್ದರು. ವಾರಾಂತ್ಯದಲ್ಲಿ ಅಪ್ಪನ ಮೆನೆಗೆ ಹೋಗಿ ದಿನಕರನನ್ನು ಅಲ್ಲಿಗೆ ಕರೆಸಿಕೊಳ್ಳುತ್ತಿದ್ದಳು. ದಿನಕರನು ತನಗೇನೂ ಅರಿಯದವನಂತೆ ಬದುಕುತಿದ್ದ.  ಇನ್ನೂ ಸಂಸಾರ ಸರಿಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿರಲಿಲ್ಲ, ಗಾಯ ಇನ್ನಷ್ಟು ಉಲ್ಬಣಗೊಂಡರೆ ನಮ್ಮ ಸಂಸಾರದಲ್ಲಿ ಸರಿಮಾಡಲಾಗದಂತೆ ಸಮಸ್ಯೆ ಉಂಟಾಗಬಹುದೆಂದು ಕೂಡಲೇ ಎಚ್ಚೆತ್ತುಕೊಂಡ ಜಾನಕಮ್ಮ ದಂಪತಿಗಳು ತಮ್ಮ ಸಾಮಾನುಗಳನ್ನು ಕಟ್ಟಿಕೊಂಡು ದೂರದ ಊರಿಗೆ ಪ್ರಯಾಣ ಬೆಳಸಿದರು. ದಿನಕರ ತಂದೆ ತಾಯಿಯ ನಿರ್ಧಾರಕ್ಕೆ ತನ್ನ ಸಮ್ಮತಿ ಸೂಚಿಸಿ ಅವರಿಗೆ ಬೇಕಾದ ವ್ಯವಸ್ತೆಯನ್ನ ತಾನೇ ಮಾಡಿದ. ಅವರಿಗೆ ಬೇಕಾದಾಗ ಸಂಪರ್ಕಿಸಲು ದೂರವಾಣಿಯ ಸಂಪರ್ಕ ಕೊಡಿಸಿ ಹೊಸ ನೆಲೆಯನ್ನ ಸೃಷ್ಟಿ ಮಾಡಿದ, ಜಾನಕಮ್ಮ ಸಂಬಂದಿಕರ ಪ್ರಶ್ನೆಗೆ ಅನಾರೋಗ್ಯದ ನೆಪವೊಡ್ಡಿ ಊರಿಗೆ ಬಂದಿರುವುದಾಗಿ ವಿಷಯವನ್ನು ಗುಟ್ಟು ಮಾಡಿದರು.

ಸಂಸಾರವೆಂಬುದು ಬಂಧನವಲ್ಲ ಇಲ್ಲಿ ಎಲ್ಲರೂ ಸ್ವತಂತ್ರರು ಅವರವರ ದೃಷ್ಟಿ ಕೋನದಲ್ಲಿ ಅವರೇ ಸರಿ. ಇನ್ನೊಬ್ಬರ ತಪ್ಪುಗಳನ್ನ ಎತ್ತಿ ಆಡುವುದನ್ನ ಬಿಟ್ಟು ಅವರೊಂದಿಗೆ ಸರಿದೂಗಬೇಕು. ಅತ್ತೆ ಸೊಸೆ ಅಮ್ಮ ಮಗಳಂತೆ ಬದುಕಬೇಕು. ಇಬ್ಬರೂ ತಂತಮ್ಮ ಪ್ರತಿಷ್ಠೆಯನ್ನ ಬದಿಗಿಟ್ಟು ಸಂಸಾರದ ಬಂಡಿಯಲ್ಲಿ ಗಾಲಿಗಳಾಗಬೇಕು, ಆಗಲೇ ಅದೊಂದು ಬದುಕು ಜಟಕಾಬಂಡಿ.  ಊರಿಗೆ ಬಂದು ತನ್ನ ತಪ್ಪುಗಳನ್ನೆಲ್ಲಾ ಮೆಲಕು ಹಾಕುತ್ತ ಮುಪ್ಪಿನ ದಿನವನ್ನ ಕಾಯುತ್ತ ಜಾನಕಮ್ಮ ದಂಪತಿಗಳು ಆಕಾಶದ ತುತ್ತ ತುದಿಯ ನೋಡುತ್ತಾ ಕುಳಿತರು.

========

ಇದು ಭಾಗ್ಯ

ಇದು ಭಾಗ್ಯ,
 ಇದು ಭಾಗ್ಯ
 ಇದು ಭಾಗ್ಯ ನಮದು !!  

ಎತ್ತ ಸಾಗುತ್ತಿದೆ ರಾಜ್ಯದ ರಾಜಕಾರಣ
ಕಾಣದ "ಕೈ"ಗಳ ನಿಲ್ಲದ ಹಗರಣ
ನಿಷ್ಠಾವಂತರಿಗೆ ಸಿಗುವುದು ಮರಣ
ಕಳ್ಳ ಕಾಕರಿಗೆ ಮಂತ್ರಿಗಿರಿಯ ಆಭರಣ !

ಅಲ್ಪಸಂಕ್ಯಾತರಿಗೆ ಶಾದಿ ಭಾಗ್ಯ
ಬಡವ ಬಲ್ಲಿದನಿಗೆ ಅನ್ನ ಭಾಗ್ಯ
ಬೊಕ್ಕಸಕ್ಕೆ ಬೀಗ ಭಾಗ್ಯ
ರಾಜ್ಯದ ಜನರಿಗೆ ಸಾಲ ಭಾಗ್ಯ !