Tuesday, January 29, 2013

ಅಂತಿಮ ನುಡಿ



ಮನದಾಳದ ಗುಹೆಯಲ್ಲಿ ಹೇಳಲಾರದ ನೋವೊಂದು
ಕಡಲಾಚಿನ ತೀರದಲಿ ಭೋರ್ಗರೆಯುವ ರಣಹದ್ದಿನಂತೆ
ಘೋರ ಗುಡುಗು ಮಿಂಚುಗಳ ಸೋಲಿಸುವ ತವಕದಲಿ
ಮುನ್ನುಗ್ಗಿ ಬರುತಲಿದೆ ತನ್ನ ಇಂದೇ ಕೊನೆಯಾಗಿಸಲೆಂದು !!

ರಮ್ಯ ಸೌಂದರ್ಯವ ಗುರುತಿಸಿ ನಗುವ ನನ್ನೀ ನಯನಗಳು
ರಮಣನ ಆತ್ಮದ ಕಂಪನಕ್ಕೆ ಬೆರಗಾಗಿ ಕಂಬನಿ ಸುರಿಸಿಹುದು
ಜಗವ ಬೆಳಗಿಸುವ ಸೂರ್ಯ ದೇವನಿಗೆ ಕತ್ತಲಾವರಿಸಿದಂತೆ
ಮುಸ್ಸಂಜೆ ಗಾಳಿಯಲಿ ಮೌನ ತನ್ನ ತಾಂಡವ ನರ್ತನದಲಿದೆ !!

ಕರ್ಜೂರದ ಸವಿಯುಂಡ ದೇಹವಿದು ಜರ್ಜರಿದು ನಡುಗುತಿದೆ
ಕಷ್ಟ ಸುಖಗಳನು ದಾಟಿ ಬಂದ ಕಾಲುಗಳಿಂದು ಸೊಲುತಲಿದೆ
ಚೈತನ್ಯದ ಗೂಡಾದ ಚಿಂತನೆಗಳು ಚೂರು ಚೂರಾದಂತಿದೆ
ಜೀವವಾಯು ತನ್ನ ವೇಗವ ತಗ್ಗಿಸಿದಂತೆ ಭಾಸವಾಗುತಲಿದೆ !!

ಇದೇನು ದಿಡೀರನೆ ಸಾವು ಸಮೀಪಿಸುವ ಮುನ್ಸೂಚನೆಯೋ
ಪಂಚಬೂತಗಳೊಂದಿಗೆ ದೇಹ ಲೀನವಾಗುವ ಚಲನವಲನವೋ
ದೈಹಿಕ ಜೀವನ ತಿಲಾಂಜಲಿಯ ಸ್ವಕಪೋಲಕಲ್ಪಿತ ಆಲೋಚನೆಯೋ
ಮುಂದಿನದನ್ನು ನನಗೆ ತಿಳಿಸದೇ ದಕ್ಷಿಣಾಧಿಪತಿಯ ಆಗಮನವೋ ?


Sunday, January 27, 2013

ದೇವರು



ನಮ್ಮ ನಂಬಿಕೆಗಳು ಅನಂತ 
ಮೂಡವಾಗಿದ್ದರೆ ಅದೊಂದು ದುರಂತ !!

ಅವನ ಪವಾಡಗಳು ಹಲವು 
ನಿಗೂಡವಾಗಿದ್ದರೆ ಬಲವಾಗುವುದು ನಿಲುವು !!

ಅವನಲ್ಲಿ ಒಲಿದರೆ ಮನಸ್ಸು
ಅಧಿಕವಾಗುವುದು ಭಕ್ತನೊಬ್ಬನ ಆಯುಸ್ಸು !! 

ಅವನಂತೆ ನಮ್ಮೆಲ್ಲರ 'ದೇವ'ನು
ಹರಸುವನು ಒಂದರಮೇಲೊಂದು ವರಗಳನು !!

Thursday, January 24, 2013

ಪ್ರಳಯ



ಪ್ರಳಯ ಎಂದರೆ ಇದೇ ಅಲ್ಲವೇ ಸ್ವಾಮೀ
ದಿನ ದಿನದ ಸಾವು
ಎಂದೂ ನಿಲ್ಲದ ನಿರಂತರ ಗೋಳು !!

ಕಾಶ್ಮೀರದ ಕಣಿವೆಯಲ್ಲಿ ಸಲ್ಲದ ಉಗ್ರರ ಉಪಟಳ
ಕಣ್ಣ ಮುಂದೆ ದಹನವಾಗುತಿದೆ ಯೋಧನ ಬಿಸಿದೇಹ
ಕಣ್ಣು ಮುಚ್ಚಿ ಕೂರುತಿದೆ ಸ್ವಾತಂತ್ರ್ಯ ಪಡೆದ ಸಶಕ್ತ ಭಾರತ ದೇಶ !! ಪ !!

ರಾಜ್ಯ ರಾಜ್ಯಗಳ ಮಧ್ಯೆ ಗಡಿ ಭೂಮಿಗಾಗಿ ಹಾರಾಟ
ನಿರಂತರ ಸಾಗುತಿದೆ ಕಾವೇರಿಯ ಕಾನೂನು ಕಾದಾಟ
ನಿತ್ಯ ನೀರಿಗಾಗಿ ಪರದಾಡುತಿದೆ ಬೆಂಗಳೂರಿಗನ ಜೀವನದ ಪುಟ !! ಪ !!

ಬೇಸಿಗೆ ಬಂತೆಂದರೆ ಬರಿದಾಗುವುದು ನಮ್ಮ ಆಣೆಕಟ್ಟು
ಮಳೆಗಾಲ ಬಂದರು ಬರಲಾಗದು ಹೊಸ ಮಳೆಯ ಹುಟ್ಟು
ಸತ್ಯ, ಅಂದು ನಿಂತೇ ಹೋಗುವುದು ಯಾಂತ್ರಿಕನ ಜೀವನದ ಗುಟ್ಟು !! ಪ !!

ಬೇಕೆ ಸ್ವಾಮೀ ಇತನ್ಮಧ್ಯೆ ಜಾತಿ ಮತಗಳಿಗಾಗಿ ಕಾದಾಟ
ರಾಜಕೀಯ, ಅಧಿಕಾರ, ಭಾಷೆ, ಪಂಥಗಳಿಗಾಗಿ ಹೊಡೆದಾಟ
ಎಂದೋ ನಿರ್ಧರಿಸಿಹನು ಅದಾಗಲೇ ವಿಧಿ ತಾನಾಡುವ ಕೋನೆಯ ಆಟ !!

ಪ್ರಳಯ ಎಂದರೆ ಇದೇ ಅಲ್ಲವೇ ಸ್ವಾಮೀ
ದಿನ ದಿನದ ಸಾವು
ಎಂದೂ ನಿಲ್ಲದ ನಿರಂತರ ಗೋಳು !!


Sunday, January 20, 2013

ಸೂರ್ಯ





ಸೂರ್ಯ ಕಾಂತಿಯ ರಮ್ಯ ಕಾಶಿ,
ಹೊಳೆಯುತಲಿದೆ ವನ ಸಸ್ಯ ರಾಶಿ,
ಚೈತನ್ಯದ ಝೇಂಕಾರಮಯ ಮೂರ್ತಿ
ಅಜರಾಮರವು ನಮ್ಮೀ ಬಾಸ್ಕರನ ಕೀರ್ತಿ !!

ಜಗವ ಬೆಳಗಿಪ ಸೂರ್ಯನಿಗೂ,
ಇರುಳ ಅರಸನಲ್ಲೇಕೋ ಮುನಿಸು,
ಬಿದಿಗೆ ಚಂದಿರನ ಸೌಂದರ್ಯಕೆ,
ರವಿಗೂ ತಾಳಲಾಗದ ಅಸೂಯೆ !!

ಮೂಡಣದ ದೊರೆಯ ಮನಸಿರಿಯೇ
ಅಮಾವಾಸ್ಯೆಗೆ ಕರಗುವುದು ನೀ ಸರಿಯೇ
ಬಾನ ಅಂಗಳದ ಈ ಮಧುರ ಸ್ನೇಹಕ್ಕೆ 
ಪೂರ್ಣಿಮೆಯು ಮತ್ತೆ ಮತ್ತೆ ಬರಲಾರದೇ ?