Monday, July 30, 2012

ಕನಕಾಂಗಿ



ನುಲಿಯುವ ಹುಡಿಗಿಯೇ ನನ್ನ ಕನಕಾಂಗಿ,
ಮನದಲ್ಲಿ ಮಿನುಗುವ ಆಸೆಯ ಪಂಚರಂಗಿ,
ಪ್ರತಿಕ್ಷಣ ನೆನಪಲ್ಲೇ ಕಳೆದೆ ನಾ ಏಕಾಂಗಿ,
ಎಂದಾಗುವೆಯೋ ನೀ ನನ್ನ ಅರ್ಧಾಂಗಿ !!

ಮನದ ಮೂಲೆಯಲ್ಲಿ ಎಂಥದೋ ತಳಮಳ,
ಕಡಲ ಅಲೆಯನು ಮೀರಿ ನಿಲ್ಲುಸುವ ಸಪ್ಪಳ,
ಸರಳ ಸಜ್ಜನ ಸ್ವಭಾವದಲಿ ಮೂಡಿದ ಕಳವಳ,
ಎಂದು ಸಿಗುವುದೋ ಈ ನನ್ನ ಪ್ರೀತಿಯ ಹವಳ !!

ತಡವರಿಸಿದೆ ತನುವು ನಿನ್ನ ಪ್ರೀತಿಯ ಕೇಳಲು,
ಕನವರಿಸಿದೆ ಮನವು ನನ್ನ ಬಯಕೆಯ ಹೇಳಲು,
ಪ್ರತಿಬಾರಿಯೂ ಬಿಡದೆ ಪ್ರಯತ್ನವ ನಾ ಪಡಲು,
ಒಲಿಯುವಳು ಈ ನಾರಿ, ಕಂಕಣ ಕೂಡಿಬರಲು!!

Saturday, July 28, 2012

ಪ್ರಯಾಣ

ರಘು ಎಂದೂ ಇಷ್ಟೊಂದು ವಿಚಲಿತನಾಗಿರಲಿಲ್ಲ, ಅವನ ಕಾರ್ ಡ್ರೈವಿಂಗ್ ಅದೊಂದು ಕೌಶಲ್ಯ, ಅಲ್ಲಿ ಅವಿರತ ಶ್ರದ್ದೆ ಇತ್ತು, ಪ್ರಯಾಣಿಕರ ಜೀವದ ಮೌಲ್ಯ ಮುಖ್ಯವಾಗಿತ್ತು. ರಘು ಒಮ್ಮೆಯೂ ಶಿಸ್ತನ್ನ ಉಲ್ಲಂಗಿಸಿದವನಲ್ಲ. ಕಾನೂನು ಇರುವುದು ಪಾಲನೆಗಾಗಿ ಅನ್ನುವಷ್ಟು ತತ್ವ ಸಿದ್ದಾಂತಕ್ಕೆ ಜೋತು ಬಿದ್ದಿದ್ದ. ಸದಾ ತಾನು ಇನ್ನೊಬ್ಬರಿಗೆ ಮಾರ್ಗದರ್ಶನವಾಗಬೇಕು ಅನ್ನುವಷ್ಟು ಮುಂದೆ ಸಾಗಿದ್ದ. ಅವನ ಜೀವನ ಶೈಲಿ ಈ ಘಟ್ಟಕ್ಕೆ ಬರಲು ತಂದೆಯೇ ಸ್ಪೂರ್ತಿ. ದೇಶದ ರಕ್ಷಣೆಗೆ ತನ್ನ ಜೀವ ಕೊಟ್ಟ ಮಹಾನ್ ದೇಶ ಸೇವಕ. ಅಂದು ಯುದ್ದಕ್ಕೆ ಕರೆ ಬಂದಿತ್ತು, ಮೇಜರ್ ರಾಜೇಶ್ ತನ್ನ ಸಂಸಾರದ ಜೊತೆಗೆ ಕೊಡಗು ನೋಡಲು ಸಿದ್ದರಾಗಿದ್ದರು. ರಘು ಇನ್ನು ಪ್ರಾಥಮಿಕ ಶಾಲೆಗೇ ಹೋಗುವ ಹುಡುಗ ಅವನಿಗೆ ತನ್ನ ರಜೆಯ ಸವಿಯುವ ಕಾತರ. ತಂದೆಗೆ ನಾವು ಹೋಗುವ ಸ್ತಳಗಳ ಕುರಿತು ಅದಾಗಾಲೆ ಹಲವುಬಾರಿ ಕೇಳಿ ತಿಳಿದಿದ್ದ.. ಅಚಾನಕವಾಗಿ ಬಂದ ತಂತಿ ನೋಡಿ ರಾಜೇಶ್ ಧಂಗಾದರು. ಅವರ ಸೇವೆ ಸೈನ್ಯಕ್ಕೆ ತುರ್ತಾಗಿ ಅವಶ್ಯಕವಾಗಿತ್ತು. ದೇಶಸೇವೆಗೆ ಮುಡಿಪಾಗಿಟ್ಟ ಜೀವ, ಧ್ಯೇಯ ಸಾದನೆಗೆ ಪ್ರಾಮುಖ್ಯತೆ ಕೊಟ್ಟಿದ್ದರು. ತಮ್ಮ ಬಹು ನಿರೀಕ್ಷಿತ ಪ್ರವಾಸ ಮೊಟಕು ಗೊಳಿಸಿ ದೇಶ ಸೇವೆಗೆ ಹೋದವರು. ರಘು ಅಳುವನ್ನು ನೋಡಿ ಮತ್ತೆ ಇನ್ನೊಮ್ಮೆ ನಿನ್ನ ಜೊತೆ ಕಂಡಿತ ಹೋಗೋಣವೆಂದು ಆಶ್ವಾಸನೆ ಕೊಟ್ಟಿದ್ದರು. ಹೆಂಡತಿಯ ಭಯವ ನೋಡಿ ಅವರಿಗೆ ಆಶ್ಚರ್ಯವಾಗಿತ್ತು. ಆಕೆಯ ಜೊತೆ ಹತ್ತು ನಿಮಿಷ ಮಾತಾಡಿ.. ಪ್ರೀತಿಯ ಸ್ಪರ್ಶದಿಂದ ಕುಶಿಗೊಳಿಸಿದ್ದರು.

ರಾಜೇಶ್ ಸಂಸಾರ ಊರಿಗೆ ಆದರ್ಶಪ್ರಾಯವಾಗಿತ್ತು. ರಾಜೇಶ್ ವರ್ಷಕ್ಕೊಮ್ಮೆ ಬಂದಾಗ ಊರಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗೆ ಊಟಕ್ಕೆ ಕರೆಯೋದನ್ನ ಮರೆಯುತ್ತಿರಲಿಲ್ಲ. ರಾಜೇಶ್ ಗೂ ಅಷ್ಟೇ ಪ್ರೀತಿ ಊರಜನರ ಮೇಲೆ. ಪ್ರತಿ ಬಾರಿ ಬಂದಾಗ ಯಲ್ಲರ ಜೊತೆ ಸಮಯ ಕಳೆಯುತ್ತಿದ್ದ. ಓಡಿ ಆಡಿದ ಊರು, ತಿದ್ದಿ ಬೆಳೆಸಿದ ಶಾಲೆ, ಸುತ್ತ ಮುತ್ತಲಿನ ಪರಿಸರ ಅವನಿಗೆ ಸದಾ ಪ್ರಿಯವಾಗಿತ್ತು. ತನ್ನ ನಿವ್ರತ್ತಿ ಬದುಕಿನ ಬಗ್ಗೆಯೂ ಸಾಕಷ್ಟು ಕನಸು ಕಂಡಿದ್ದ. ಊರನ್ನ ದಾಟಿ ವೇಗವಾಗಿ ಚಲಿಸುತ್ತಿದ್ದ ಬಸ್ ಬಂದು ತಲುಪಿದ್ದು ರೈಲ್ವೆ ಸ್ಟೇಷನ್ ಗೆ. ಅಲ್ಲಿಂದ ಬೆಂಗಳೂರಿಗೆ ಬಂದು ವಿಮಾನ ನಿಲ್ದಾಣಕ್ಕೆ ಹೋಗುವುದರಲ್ಲಿ ಅವನ ಮನ್ನಸ್ಸು ವಿಚಲಿತ ಗೊಂಡಿತ್ತು. ಮನೆಯನ್ನು ಬಿಟ್ಟು ಹೊರಟಾಗ ರಘು ಕೋಪ ಗೊಂಡಿದ್ದ ಅವನಿಗೆ ಮಾತನಾಡಲು ಸಿಟ್ಟು ಬಂದಿತ್ತು. ಅಪ್ಪ ನನಗೆ ಮೋಸ ಮಾಡಿದರು ಅಂತ ಪಕ್ಕದಮನೆಯಲ್ಲಿ ದೂರು ಕೊಟ್ಟಿದ್ದ. ಅವನ ದುರನ್ನ ಪಡೆದು ವಕೀಲರು ವಿಚಾರಣೆಗೆ ಆಗಮಿಸಿದ್ದರು. ವಿಷಯ ತಿಳಿದು ವಿಷಾದ ವ್ಯಕ್ತ ಪಡಿಸಿದ್ದರು.

ರಾಜೇಶ್ ಸೈನ್ಯದ ಕ್ಯಾಂಪ್ ತಲುಪಿದಾಗ ಅವನಿಗಾಗಿ ಸಾಕಷ್ಟು ಸಂದೇಶಗಳು ಬಂದಿತ್ತು. ಪ್ರತಿಯೊಂದು ಸಂದೆಶಕ್ಕು ಉತ್ತರ ಕೊಟ್ಟು ಅವನು ಸಾಕಾಗಿದ್ದ. ಪ್ರಯಾಣದ ಬೇಗೆ ಅವನನ್ನು ಕುಸಿದು ಕೂಡಿಸಿತ್ತು. ರಾಜೇಶ್ ಗೆ ಸಹಾಯಕನಾಗಿ ಮಂಜುನಾಥ್ ಹೆಸರುವಾಸಿಯಾಗಿದ್ದ. ರಾಜೇಶ್ ನ ಪ್ರತಿಯೊಂದು ಕೆಲೆಸವನ್ನು ತಾ ಕಲಿತಿದ್ದ. ಅದಾಗಲೇ ಶತ್ರು ಸೈನ್ಯ ತುಂಬಾ ಹತ್ತಿರ ಬಂದಿತ್ತು. ಮಂಜುನಾಥ್ ತಾನು ಮಾಡುತಿದ್ದ ಪ್ರತಿಯೊಂದು ಕೆಲೆಸವನ್ನು ರಾಜೇಶ್ ಗೆ ವರದಿ ಒಪ್ಪಿಸಿ, ಮುಂದಿನ ಆದೇಶಕ್ಕೆ ಕಾಯುತ್ತಿರುವ ಬಗ್ಗೆ ಹೇಳುತ್ತಾನೆ. ರಾಜೇಶ್ ಗೆ ಒಮ್ಮೆ ಜೀವ ಕೈಗೆ ಬಂದ ಅನುಭವ. ಶತ್ರು ಸೈನ್ಯ ಅದಾಗಲೇ ನಮ್ಮ ಬಳಿ ಬಂದಾಗಿತ್ತು. ಮೇಲಿನಿಂದ ಇನ್ನು ಆದೇಶ ಬರಲಿಲ್ಲ ಅನ್ನೋದೇ ನೋವಿನ ಸಂಗತಿ. ಮಂಜುನಾಥ್ ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿರಬೇಕು. ಕೂಡಲೇ ರಾಜೇಶ್ ಗೆ ಹೆಡ್ ಆಫೀಸಿಗೆ ಹೋಗಿ ವಿಶ್ರಾಂತಿ ಪಡೆಯಲು ವಿನಂತಿಸಿದ. ರಾಜೇಶ್ ತನ್ನ ಅಸಹಾಯಕತೆ ಕೆಲೆಸದಲ್ಲಿ ಎಂದೂ ತೋರಿಸಿದವನಲ್ಲ. ತಾನು ಚುರುಕಾಗಿ ಏನು ಆಗಿಲ್ಲ ಅನ್ನುವಂತೆ ನಟಿಸಿದ. ಮೇಲಿನ ಅದಿಕಾರಿಗಳಿಗೆ ವಿಷಯ ತಿಳಿಸಿ ಆದೇಶವನ್ನು ಪಡೆದು, ಸದಾ ಸೈನ್ಯಕ್ಕೆ ಆದೇಶ ಕೊಟ್ಟ. ಹಗಲು ರಾತ್ರಿಯನ್ನದೆ ನಿದ್ದೆ ಕೆಟ್ಟು ಕೆಲೆಸ ಮಾಡಬೇಕಾಯಿತು. ಯುದ್ದ ಅಂತಿಮವಾಗಿ ವಿಜಯಲಕ್ಷ್ಮಿ ಬಂದಿದ್ದಳು. ರಾಜೇಶ್ ಸೈನ್ಯದ ತುರ್ತು ಆಸ್ಪತ್ರೆಯಲ್ಲಿ ಬಂದು ಸೇರುತ್ತಾನೆ. ಅವನಿಗೆ ವಿಪರೀತ ಜ್ವರ ಬಾದಿಸಿತ್ತು. ಮರುದಿನ ಪ್ರಜ್ಞೆಯನ್ನು ಕಳೆದುಕೊಂಡು ಮಲಗಿದ್ದ ವಿಷಯ ತಂತಿ ಮುಖೇನ ರಘು ಕೈ ಸೇರುತ್ತೆ. ಅಪ್ಪನಿಗೆ ಹುಷಾರಿಲ್ಲ ಅಂತೆ ಅನ್ನೋದರಲ್ಲೇ ಅಲ್ಲಿ ರಾಜೇಶ್ ನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಘು ತಾಯಿ ಜೊತೆ ಹೊರಡಲು ಸಿದ್ದರಾದಾಗ, ಪಕ್ಕದಮನೆ ವಕೀಲರು ಬಂದು ವಿಷಯ ಹೇಳುತ್ತಾರೆ. ರಘು ಮಹಡಿಯೇ ತನ್ನ ಮೇಲೆ ಬಿದ್ದಂತೆ ಅಳುತ್ತಾನೆ. ತಾಯಿ ಅರೆ ಪ್ರಜ್ನಾವಸ್ಥೆಯಲ್ಲೇ ೨ ತಿಂಗಳು ಹಾಸಿಗೆ ಹಿಡಿಯುತ್ತಾಳೆ. ರಘು ೨ ತಿಂಗಳೊಳಗೆ ತಂದೆ ತಾಯಿಯನ್ನು ಕಳೆದು ಕೊಂಡಿದ್ದ. ಊರ ಜನರ ಆರೈಕೆಯಿಂದನೆ ಅವನು ದೊಡ್ಡವನಾಗಿದ್ದ. ತಂದೆಯಂತೆ ಕೆಲೆಸದಲ್ಲಿ ಶ್ರದ್ದೆ ಇರಬೇಕು ಅನ್ನೋದನ್ನ ಕಲಿತು ಬಿಟ್ಟಿದ್ದ.

ವಿದ್ಯಾಭ್ಯಾಸ ಮೊಟಕು ಗೊಳಿಸಿ ಸ್ವಯಂ ಉದ್ಯೋಗ ಪ್ರಾರಂಬಿಸುವ ಕನಸು ಕಂಡಿದ್ದ. ಅದರಂತೆ ಒಂದು ಕಾರ್ ಕೊಂಡು ಹೆಸರುವಾಸಿಯಾಗಿದ್ದ. ರಘು ಯಾವತ್ತು ಪಡದ ನೋವು ಇಂದು ಅವನ ಕಾಡಿತ್ತು, ಕಾರಣ ಅವರ ಪ್ರಯಾಣ. ಹಿಂದಿನ ಸೀಟ್ ನಲ್ಲಿ ಚಿಕ್ಕ ಸಂಸಾರ ಕೊಡಗು ನೋಡ ಹೊರಟಿತ್ತು. ತಾನು ಚಿಕ್ಕವನಾಗಿದ್ದಾಗ ನಡೆದ ಪ್ರತಿಯೊಂದು ಘಟನೆ ಅವನ ಮನ ಪಟಲವನ್ನು ದಾಟಿ ಸಾಗಿತ್ತು. ಹಿಂದಿನ ಸೀಟ್ ನಲ್ಲಿ ಕೂತ ಮಹೇಶ್ ಕಾರಿನ ವೇಗವನ್ನು ಗಮನಿಸಿ ಸಂಶಯ ಪಡುತ್ತಾನೆ. ಇಲ್ಲಿಯ ತನಕ ತಾನು ಹೆಮ್ಮೆ ಪಟ್ಟ ಚಾಲಕ ಇವನೇನಾ ಅನ್ನುವಷ್ಟು ಗೊಂದಲನಾಗಿದ್ದ. ಕೂಡಲೇ ರಘುವಿಗೆ ಕಾರ್ ಪಕ್ಕಕ್ಕೆ ನಿಲ್ಲಿಸಲು ಸೂಚನೆ ಕೊಟ್ಟ. ರಘು ತಾನು ಏನು ಮಾಡುತ್ತಿರುವೆ ಅನ್ನೋದನ್ನೇ ಮರೆತು ಹೋಗಿದ್ದ. ಅದೃಷ್ಟವಶಾತ್ ಅವರ ಕಾರ್ ಸುರಕ್ಷಿತವಾಗಿ ನಿಂತಿತ್ತು. ಮಹೇಶ್ ರಘುವನ್ನ ಹೊರಗಡೆ ಕರೆದು ವಿಚಾರಿಸುತ್ತಾನೆ. ರಘು ತನಗೇನು ಆಗಲಿಲ್ಲ ಎನ್ನುವಂತೆ ನಟಿಸುತ್ತಾನೆ. ಎಷ್ಟಾದರೂ ರಾಜೇಶ್ ನ ಮಗ ತಾನೇ. ಕೊನೆಗೆ ಮಹೇಶ್ ನ ಆಪ್ತತೆಗೆ ಮನಸೋತು ತನ್ನೆಲ್ಲ ಕಥೆಯನ್ನು ಹೇಳುತ್ತಾನೆ. ಮಹೇಶ್ ಮಾನಸಿಕ ತಜ್ಞ. ಪೂರ್ಣ ಕಥೆಯನ್ನು ಕೇಳಿ ರಘುವಿನ ಮೇಲೆ ಅಂತ ಕರುಣೆ ಹೆಚ್ಚಾಗುತ್ತೆ. ರಘುವನ್ನು ಪಕ್ಕಕ್ಕೆ ಕೂರಿಸಿ ತಾನು ಡ್ರೈವ್ ಮಾಡುತ್ತಾನೆ. ಮಹೇಶ್ ರಘು ತನ್ನ ತಮ್ಮನೇನೋ ಅನ್ನುವಷ್ಟು ಸಲಿಗೆ ಕೊಟ್ಟು ಕೊಡಗಿನ ಸವಿಯನ್ನ ಸವಿಯುತ್ತಾರೆ. ರಘು ಕೇವಲ ಡ್ರೈವರ್ ಆಗಿರಲಿಲ್ಲ ಮಹೇಶ್ ನ ಮೆಚ್ಚಿನ ಗೆಳೆಯನಾಗುತ್ತಾನೆ.

ರಘು ಒಂದು ಕಾಲ್ಪನಿಕ ವ್ಯಕ್ತ್ತಿ, ರಘುವಿನಂತೆ ಸಾವಿರಾರು ನೊಂದ ಜೀವ ನಮ್ಮ ಕಣ್ಣು ಮುಂದಿದ್ದಾರೆ. ಆದರೆ ಮಹೇಶ್ ನಂತಹ ಕೆಲವೇ ಮಂದಿ ಕಾಣಸಿಗುತ್ತಾರೆ. ಮಹೇಶ್ ತಾನು ಅಷ್ಟೊಂದು ದೊಡ್ಡ ಪಧವಿಯಲ್ಲಿದ್ದರು ರಘುವನ್ನು ಕೆಲೆಸದ ಆಳಿನಂತೆ ನೋಡಲಿಲ್ಲ. ಅವನಲ್ಲಿನ ಅಂತ ಕರಣ ಜಾಗ್ರತವಾಗಿತ್ತು. ಪ್ರತಿಯೊಬ್ಬರಿಗೂ ಸ್ಪಂದಿಸುವ ಮನೋಬಾವ ತುಂಬಿತ್ತು. ಪ್ರಿಯರೆ ನಮ್ಮ ಸುತ್ತ ಮುತ್ತ ಅದೆಷ್ಟೋ ಜನರಿದ್ದಾರೆ. ಬರಿ ಪ್ರಿಯವಾದ ಒಂದೆರೆಡು ಮಾತು ನಮ್ಮನ್ನು ಬಡವನಾಗಿಸೋಲ್ಲ. ಸಮಯ ಸಂದರ್ಬ ಸಿಕ್ಕಾಗ ಮೂಕನಂತೆ ಕುಳಿತಿರುವ ಬದಲು ಉಭಯ ಕುಶಲೋಪರಿ ಮಾತನಾಡೋಣ. ಸದಾ ಜೀವನವೆಂಬ ಪ್ರಯಾಣವನ್ನು ಆನಂದಿಸಿ, ಬದುಕುವುದು ಎರೆಡೆ ದಿನವನ್ನಾದರೂ ಅದನ್ನ ಸವಿಯೋಣ ಬನ್ನಿ.


ಈ ಸಾಲುಗಳನ್ನು ಬರೆಯುವಾಗ ನನಗೆ ನೆನಪಾದ ಅದೆಷ್ಟೋ ಮಂದಿ ಡ್ರೈವರ್ಗಳು, ಅದರಲ್ಲೂ ಸದಾ ನೆನೆಪಾಗುವೋರು ಡ್ರೈವರ್ "ಆನಂದ್" ಮತ್ತು "ದೀಪು".

Friday, July 27, 2012

ಹೆಂಡತಿ ಜೀವ ಹಿಂಡುತಿ



ಹೆಜ್ಜೇನ ಹಿಂಡಿಗೆ ಕೈ ಹಾಕಿಯೇನು,
ಹೆಬ್ಬಾವ ಹೆಡೆಯ ನಾ ಮೆಟ್ಟಿಯೇನು,
ಹೆಮ್ಮರವ ಕೈಯಲ್ಲೇ ಮುರಿದೇನು,
ಆದರೆ ಹೆಂಡತಿಯ ಬಾಯನ್ನು ನಾ ಮುಚ್ಚಲಾರೆನು !!

ಮನೆಯ ಕೆಲೆಸವ ನಾ ಮಾಡಿಯೇನು,
ಮನಸು ತುಂಬಿ ನಾ ಹಾಡಿಯೇನು,
ಕಸದ ರಾಶಿಯಲ್ಲೇ ನಾ ಮಲಗಿಯೇನು,
ಆದರೆ ಹೆಂಡದ ಬಾಟಲಿಯ ನಾ ಹಿಡಿಯಲಾರೆನು !!

ಚಾಟಿಯ ಏಟನು ನಾ ತಿಂದೇನು,
ಕುಸ್ತಿಯ ಪಂದ್ಯವ ನಾ ಗೆದ್ದೇನು,
ಕತ್ತಿಯ ಯುದ್ದವ ನಾ ಬಲ್ಲೆನು,
ಆದರೆ ಪತ್ನಿಯ ಪೆಟ್ಟನ್ನು ನಾ ತಾಳಲಾರೆನು !!

ಶ್ರಾವಣದ ವರ್ಷಧಾರೆ






ಬಿರುಸಾಗಿ ಸುರಿಯುತ್ತಿತ್ತು ಶ್ರಾವಣದ ವರ್ಷಧಾರೆ,
ಜುಳಜುಳನೆ ಹರಿಯುತಿತ್ತು ನದಿಯ ಅಮೃತಧಾರೆ,
ಹಸನಾಗಿ ಹೊಳೆಯುತಿತ್ತು ಭುವಿಯ ಸಸ್ಯರಾಶಿ,
ಹೊನ್ನಿನಂತೆ ಮಿಂಚುತಿತ್ತು ಕಲ್ಲು ಮಣ್ಣಿನ ರಾಶಿ !!

ಕಪ್ಪೆ,ಮೀನುಗಳಿಗೆ ಹೊಸವರುಷದ ಕುಶಿ ಬಂದಿತ್ತು ,
ರೆಪ್ಪೆ ಮುಚ್ಚಿ ತೆಗೆಯೋದರಲ್ಲೇ ಅದು ಜಿಗಿಯುತಿತ್ತು,
ಆಗತಾನೆ ಅಲ್ಲಿ ಹನಿ ಹನಿ ಮಳೆ ಬಂದು ನಿಂತಿತ್ತು,
ಸುತ್ತ ಮುತ್ತ ಅರಳಿದ ಹೂವು ಬಾಡಿ ಮುದುಡಿತ್ತು !!

ಹೊಂಬಿಸಿಲು ಮೂಡುತಿತ್ತು ರವಿಯ ಕಣ್ಣಿನಿಂದ,
ಕಾಮನಬಿಲ್ಲು ಕಟ್ಟಿತ್ತು ಮೋಡ ಚಲಿಸಿದರಿಂದ,
ಎಲ್ಲೆಲ್ಲು ಸೊಭಗಿದೆ ವರುಣ ಆಗಮಿಸಿದರಿಂದ,
ಮನೆಯಲ್ಲೂ ಭಯವಿದೆ ಮಿಂಚು ಗುಡುಗುಗಳಿಂದ !!

Wednesday, July 25, 2012

ಅಳು



ನಾನು ಆ ಸಂಜೆ ಅತ್ತಾಗ,
ಕಣ್ಣ ಬಿಂದು ನನ್ನ ಕಾಲಿಗೆ ಬಿದ್ದಾಗ,
ಯಾರು ಬಲ್ಲರು ನನ್ನ ಒಳಮನಸ್ಸಿನ ಕೂಗು
ಮೂಕನಾಗಿ ನೋಡುತಿದ್ದ ದೇವರೇ ನೀ ಬೇಗ ಹೇಳು !!

ಅಂದು ಮಗುವಾಗಿ ಪ್ರತಿದಿನ ಅತ್ತಿದ್ದೆ,
ಅಮ್ಮ ಸಂತೈಸಲು ಎಲ್ಲವನ್ನು ಮರೆತಿದ್ದೆ,
ಅಂದು ಸೋಲಾಗಿ ಪ್ರತಿಕ್ಷಣ ಕೊರಗಿದ್ದೆ,
ಗೆಳತಿ ಪ್ರೋತ್ಸಾಹಿಸಲು ಗೆಲುವನ್ನೇ ಸೋಲಿಸಿದ್ದೆ !!

ಇಂದು ಮಡದಿಯ ತೋಳಲ್ಲಿ ಅತ್ತಿದ್ದೆ,
ಸಾಧನೆಯ ಪಥದಲ್ಲಿ ಕಂಗಾಲಾಗಿ ನಿಂತಿದ್ದೆ,
ಕೊನೆಗೆ ಮಕ್ಕಳ ಮುಂದೂ ಅತ್ತಿದ್ದೆ,
ಅವರ ಚಿಕ್ಕ ಆಸೆಯ ಇಡೆರಿಸಲಾಗದೆ ಮರುಗಿದ್ದೆ !!

ಪ್ರತಿ ಸೋಲಲ್ಲೂ
ಮುಂದೆ ಗೆಲುವೆಯಂಬ ಆಶಾವಾದಿಯಾಗಿದ್ದೆ,
ಪ್ರತಿ ಅಳುವಿನಲ್ಲೂ
ಮುಂದೆ ನಗುವೆಯಂಬ ಸದ್ಬಯಕೆ ಹೊತ್ತಿದ್ದೆ,

ಯಾಕಾದರು ಈ ಅಳುವು ಮತ್ತೆ ಮತ್ತೆ ಬರುತ್ತಿದೆ,
ನನ್ನ ಹಳೆಯ ಕಹಿ ನೆನಪುಗಳ ಕೆದಕುತ್ತಿದೆ,
ಸದಾ ಕಣ್ಣಿಂದ ನದಿಯಾಗಿ ದುಮುಕ್ಕುತ್ತಿದೆ,
ನಗುವನ್ನೇ ಅಳಿಸಿ ಮೈಮರೆಯುತ್ತಿದೆ !! 

Monday, July 23, 2012

ಪ್ರೀತಿ



ಪ್ರೀತಿ ಎಂದೂ ಬರಿದಾಗದ ಬಿಂದಿಗೆ,
ಅದೆಷ್ಟು ಮಾರ್ಗಗಳಲ್ಲಿ ಬಂದಿದೆ,
ಎಲ್ಲೂ ನಶಿಸದಂತೆ ನಿಂತಿದೆ,
ನಮ್ಮ ತನು ಮನಗಳಲ್ಲಿ ಅರಳಿದೆ !!

ಅಕ್ಷಯ ಪಾತ್ರೆಯಂತೆ ತುಂಬಿದೆ,
ತಂದೆಗೆ ಆತ್ಮವಿಶ್ವಾಸ ತಂದಿದೆ,
ತಂಗಿಗೆ ಮನ್ನೋಲ್ಲಾಸ ಕೊಟ್ಟಿದೆ,
ತಾಯಿಗೆ ಮಾತೃವಾತ್ಸಲ್ಯ ಕರುಣಿಸಿದೆ !!

ಅಣ್ಣನ ಬೆಂಗಾವಲಲಿ ಸಿಲುಕಿದೆ,
ಅಕ್ಕನ ಕೃಪಾಕಟಾಕ್ಷ ಸಿಕ್ಕಿದೆ,
ತಮ್ಮನ ತನುವದು ಲಬಿಸಿದೆ,
ಅಷ್ಟ ದಿಕ್ಕುಗಳಲು ಪ್ರೀತಿ ಆವರಿಸಿದೆ !!

ಗುರುಗಳಲಿ ಮೆಚ್ಚುಗೆ ಗಳಿಸಿದೆ,
ಹಿರಿಯರಿಗೆ ಗೌರವ ಕೊಟ್ಟಿದೆ,
ನೆರೆ ಹೊರೆಯರನ್ನು ನಂಬಿಸಿದೆ,
ಮಿತ್ರ ಮಂಡಲದಲ್ಲೇ ಸದಾ ಮಿನುಗಿದೆ!!

ಈ ಪ್ರೀತಿಯಾಕೆ ಇನ್ನೂ ಜೀವಂತವಾಗಿದೆ ?


Friday, July 20, 2012

ಪ್ರೀತಿ-ವಿಶ್ವಾಸ


ನಾನು ಆವಾಗ ತುಂಬಾ ಚಿಕ್ಕವನಿದ್ದೆ,
ಮನೆಯಲ್ಲೆಲ್ಲಾ ಮನಸೋ ಇಚ್ಛೆ ಕುಣಿಯುತಿದ್ದೆ,
ಚೇಷ್ಟೆ ಜಾಸ್ತಿಯಾಗಿ ಬಿಸಿಯಾದ ಪೆಟ್ಟು ತಿನ್ನುತಿದ್ದೆ,
ದೊಣ್ಣೆ ತರಲು ಹೆದರಿ ಹಸಿಯಾದ ಸುಳ್ಳು ಹೇಳುತಿದ್ದೆ,
ಎಷ್ಟೇ ಹೊಡೆದರು ನಮ್ಮವರೆಂದು ಸುಮ್ಮನಾಗುತಿದ್ದೆ,
ಮರು ಕ್ಷಣದಲ್ಲಿ ಎಲ್ಲವನ್ನೂ ಮರೆತು ಬದಲಾಗುತಿದ್ದೆ !!

ಆದರೆ ಇಂದು ನಾನು ದೊಡ್ದವನಾಗಿರುವೆ,
ಮನೆಯಲ್ಲೆಲ್ಲಾ ಸಮಯ ಕಳೆಯಲು ಕಷ್ಟಪಡುತ್ತಿರುವೆ,
ಕಾಸು ಜಾಸ್ತಿ ಮಾಡಲು ಹೊಸ ದಾರಿ ಹುಡುಕುತ್ತಿರುವೆ,
ಮನಸ್ಸು ಬಂದಂತೆ ಜನರೊಂದಿಗೆ ವ್ಯವಹರಿಸುತ್ತಿರುವೆ,
ಯಾರ ಹಂಗೂ ಇಲ್ಲದೆ ಕಷ್ಟ ಪಟ್ಟು ಜೀವನ ಸಾಗಿಸುತ್ತಿರುವೆ,
ಎಷ್ಟೇ ದುಡಿದರು ಆ ಶಾಂತಿ ನೆಮ್ಮದಿಯಿಂದ ವಂಚಿತನಾಗಿರುವೆ !!

ಮುಂದೊಂದು ದಿನ ನಾವೆಲ್ಲರೂ ಮುದುಕರಾಗುವೆವು,
ಮನೆಯಲ್ಲಿ ಮಕ್ಕಳು ಮರಿಗಳಿರಲೆಂದು ಬಯಸುವೆವು,
ಸಮಯವನ್ನು ಆನಂದದಿಂದ ಸವಿಯಲು ತವತವಿಕಿಸುವೆವು,
ಹಿಂದೆ ಇದ್ದಂತೆ ಇರಲಾಗದೆ "ಒಬ್ಬಂಟಿಯಾಗಿ" ಮರುಗುವೆವು,
ನನ್ನಂತೆ ನನ್ನ ಕೂಸು ದೂರಹೊಗಲು ಮನಸ್ಸಿನಲ್ಲೇ ಕೊರಗುವೆವು,
ಬೇಕಾಗಿರುವುದು ಪ್ರೀತಿ-ವಿಶ್ವಾಸವೆಂದು ಕೊನೆಗಾಲದಲಿ ತಿಳಿಯುವೆವು !!

Monday, July 16, 2012

ಅಣ್ಣ


ದೇವಳ್ಳಿಯ ರಾಯರ ಮಗ ಗುಂಡಣ್ಣ,
ಒಂದೊಳ್ಳೆಯ ರಾಗವ ಹಾಡೋ ನನ್ನಣ್ಣ,
ಚಂದುಳ್ಳಿ ಚೆಲುವಿ ನಿನ್ನೊಂದಿಗೆ ಬಂದ್ಲಣ್ಣ,
ನಿಂತಲ್ಲೇ ಶೃಂಗಾರ ಕಾವ್ಯ ನೀ ಹಾಡಣ್ಣ !!

ನಿನ್ನಾಕೆ ಸಮುದ್ರ ಬದಿಗೆ ಒಬ್ಳೆ ಹೋದ್ಲಣ್ಣ,
ಮೋಳಿ ಚಿಪ್ಪು ಚಿಚ್ಚಿತು ಅವ್ಳಿಗೆ ನೋಡಣ್ಣ,
ಸಾಲು ಬಂಗ್ಡಿ ಮೀನಿನ ಅಂಗಡಿ ಬಂತಣ್ಣ,
ಮೂಗುಬಾಯಿ ಮುಚ್ಕಂಡು ಓಡಿ ಹೋಗಣ್ಣ !!

ಮಳೆಗಾಲದಲ್ಲಿ ನಮ್ಮ ಊರತುಂಬ ನೆರೆಯಣ್ಣ,
ಸೆಂಡಿಗೆ, ಹಪ್ಳ ಸುಟ್ಕಂಡ್ ಮನೆಯಲ್ಲೇ ತಿನ್ನಣ್ಣ,
ಕುಂದಾಪ್ರ ಸಂತಿಗೆ ಒಂದ್ಸಲಿ ಬಂದು ನೋಡಣ್ಣ,
ಚೆಂದಚೆಂದ ಹೆಣ್ಣುಮಕ್ಳು ಇದ್ರಂತ ನೀ ಹೇಳಣ್ಣ !!

Saturday, July 14, 2012

ಪರಿಚಯ



ಗೆಳೆಯ ರಾಘವೇಂದ್ರ ಸೇರೆಗಾರ್ ನ ಪರಿಚಯ,
ಡೆಲ್ ಪರಿಸರದಲ್ಲಿ ನಮ್ಮ ಮಾತಿನ ವಿನಿಮಯ,
ತಿಳಿಯಿತು ನಮ್ಮ ಈ ಪುಸ್ತಕ ಪ್ರೇಮಿಯ ವಿಷಯ,
ಈ ಕಾಲದಲಿ ನೋಡಿಲ್ಲ ಎಲ್ಲೂ ಇವನಷ್ಟು ವಿನಯ !!

ಬೆರಗಾಗಿ ನೋಡಿದೆ ನಾನಂದು ನಿಮ್ಮ ನಡೆ ನುಡಿ,
ಮರೆಯಾಗಿ ಹೋಗುವ ನಿರ್ಧಾರವ ನೀವು ಬಿಟ್ಟುಬಿಡಿ,
ಹೆಮ್ಮೆಯ ಭಾರತಾಂಬೆಯ ನೆಚ್ಚಿನ ಕರುಳ ಕುಡಿ,
ಕಟ್ಟುವಿರಿ ನೀವು ಮುಂದೊಂದು ದಿನ ಕನ್ನಡದ ಗುಡಿ !!

ಸದಾ ಗುರುಹಿರಿಯರ ನಮಸ್ಕರಿಸಿ, ನೀವಾಗಿರುವಿರಿ ಹೆಸರುವಾಸಿ,
ಸದ್ಯ ವಿದೇಶದಲ್ಲಿ ವಾಸ, ಕನ್ನಡಕ್ಕೆ ಸೀಮಿತ ನಿಮ್ಮ ವಿಶ್ವಾಸ,
ಉದ್ಯೋಗದಲಿ ಅಭ್ಯಂತರ, ಅಭ್ಯಾಸ ಸಾಗುತಿದೆ ನಿರಂತರ,
ಸಹಾಯ ಮಾಡಲು ನೀವು ಸಿದ್ದ, ಸಮಾಜ ಸೇವೆಗೆ ಕಂಕಣ ಬದ್ದ !!

Friday, July 13, 2012

ಆತ್ಮ ಕತನದಲ್ಲಿ ಒಂದು ಇಣುಕು ನೋಟ

ಆತ್ಮೀಯರೇ,

ಬಾಲ್ಯದಿಂದ ಪ್ರೌಡಾವಸ್ಥೆಗೆ ತಲುಪಿದ ಸಮಯವೂ ಪ್ರತಿಯೊಬ್ಬ ಮನುಷ್ಯನನ್ನು ಬದಲಾವಣೆಯ ಪಥಕ್ಕೆ ಕರೆದೊಯ್ಯುತ್ತೆ ಅನ್ನುತ್ತಾರೆ. ಈ ಸಮಯ ಅಷ್ಟೊಂದು ಮಹತ್ವ ಪಡೆಯಲು ಬಹಳಷ್ಟು ಕಾರಣಗಳಿರಬಹುದು ಆದರೆ ಇದು ಬಹುಮುಖ್ಯವಾಗಿ ನಮ್ಮ ಭವಿಷ್ಯವನ್ನು ನಿರ್ಧರಿಸುವ ,ವಿಧ್ಯಾಬ್ಯಾಸ ಮತ್ತು ಉದ್ಯೋಗ ಪಡೆಯುವ ಮುಖ್ಯ ಘಟ್ಟ. ನಾವು ಕಲಿಯುವ ಅಥವಾ ಮ್ಯಗೂಡಿಸಿಕೊಳ್ಳುವ ಪ್ರತಿಯೊಂದು ಗುಣ ಲಕ್ಷಣವು, ಹಾವ ಭಾವ, ನಡೆ ನುಡಿ ಮತ್ತು ಸಂಸ್ಕಾರ ಇಲ್ಲಿ ನಿರ್ಧರಿಸಲ್ಪಡುತ್ತೆ. ನನ್ನ ಬದುಕಿನ ಈ ನಾಲ್ಕು ವರುಷದ ಸುಮಧುರ ದಿನಗಳನ್ನು ನನ್ನ ನೆನಪಿನ ಗೂಡಿಂದ ಬಿಚ್ಚಿಡುತ್ತಿದ್ದೇನೆ. ವ್ಯಕ್ತಿಗತವಾದ ನನ್ನ ನಿರ್ಧಾರ ನಿಮಗೆ ಸರಿಕಾಣಿಸದಿದ್ದಲ್ಲಿ ಅಥವಾ ಇಷ್ಟವಾಗದಿದ್ದಲ್ಲಿ ಅದನ್ನ ಇಲ್ಲೇ ಮರೆತುಬಿಡಿ. ಇಲ್ಲಿ ಬರೆಯಲ್ಪಡುವ ಪ್ರತಿಯೊಂದು ವಿಷಯವು ನಾ ಕಂಡ ಅಥವಾ ನಾನು ಅರ್ಥೈಸಿಕೊಂಡ ಮಾರ್ಗವಾಗಿರುತ್ತೆ. ಕೆಲವೊಂದು ವಿಚಾರವನ್ನು ನಾನು ಮರೆತಿರಬಹುದು ಅಂತದ್ದು ಮುಂದೆ ನೆನಪಾದಲ್ಲಿ ಕೊಂಡಿ ಹಾಕಿ ಜೋಡಿಸುವ ಪ್ರಯತ್ನ ಮಾಡುತ್ತೇನೆ... ಇದೋ ಸುಮಾರು ಇಂದಿಗೆ ಹತ್ತು ವರ್ಷಗಳ ಹಿಂದೆ..

ನಾನು II PUC/CET ಪರೀಕ್ಷೆಯಲ್ಲಿ ಉತ್ತಿರ್ಣನಾದ ಸಂಭ್ರಮ ಒಂದು ಕಡೆಯಾದರೆ, ಮುಂದೆ ಏನು ಮಾಡೋದು ಅನ್ನುವ ತಳಮಳ. ಕುಂದಾಪುರದ ಪ್ರತಿಷ್ಟಿತ ಪುರೋಹಿತ ವಂಶದಲ್ಲಿ ಜನಿಸಿದ ನನಗೆ ವಂಶಪಾರಂಪರ್ಯದ ಉದ್ಯೋಗದ ಕಡೆಗೆ ಹೊಗೋದ ಅಥವಾ ವ್ರತ್ತಿ ಶಿಕ್ಷಣದ ಕಡೆಗೆ ಹೊಗೋದ ಅನ್ನೋದರಲ್ಲೇ ಗೊಂದಲ. ಒಂದು ಕಡೆ ಅಜ್ಜನಿಗೆ ಕೊಟ್ಟ ಮಾತು, ಇನ್ನೊಂದೆಡೆ ಮುಂದೆ ಓದಬೇಕೆನ್ನುವ ಹಂಬಲ. ಕೋನೆಗೂ ಸರ್ವಸಮ್ಮತದ ನಿರ್ಧಾರ ಹೊರ ಬಂತು, ಬೆಂಗಳೂರಿಗೆ ಹೋಗಿ ಚಿಕ್ಕಪ್ಪನ ಮನೆಯಲ್ಲಿ ಇಂಜಿನಿಯರಿಂಗ್ ಕಲಿಕೆ ಮಾಡುವುದಾಗಿತ್ತು. ನನಗೆ ಬೆಂಗಳೂರು ಹೊಸತು, ಒಂದೇ ತರಹ ಕಾಣಿಸುವ ಗಲ್ಲಿ ರಸ್ತೆಗಳು, ಮನೆಗಳು ಅದೇ ತರಹ ಜನಗಳು. ಒಟ್ಟಾರೆ ಅದೊಂದು ವಿಸ್ಮಯಲೋಕ ಅನ್ನಿಸುವಂತಿತ್ತು, ಹಳ್ಳಿಯಿಂದ ಪಟ್ಟಣಕ್ಕೆ ಬಂದ ನನ್ನಂತಹ ಜನರಿಗೆ ಇದು ಸರ್ವೇಸಾಮಾನ್ಯ. ಮಂಜುನಾಥನಗರದಲ್ಲಿ ನನ್ನ ಚಿಕ್ಕಪ್ಪನ ಮನೆ ಇದೆ, ಮೊದಲನೇ ಮಹಡಿಯಲ್ಲಿರುವ ಎರೆಡು ವಿಶಾಲವಾದ ಕೊಟಡಿಯಿರುವ ಸುಂದರ ಮನೆ ಅದಾಗಿತ್ತು. ಚಿಕ್ಕದಾದ ದೇವರ ಕೋಣೆ ಅದರ ಎದರುಗಡೆ ವಿಶಾಲವಾದ ಜಾಗ, ಟಿವಿ,ಸೋಫಾ,ಕಪಾಟು,ಕಂಪ್ಯೂಟರ್ ಇನ್ನಿತರ ಗ್ರಹೋಪಯೋಗಿ ವಸ್ತುಗಳ ತಾಣ ಅದಾಗಿತ್ತು. ಬಿ.ಮ್.ಸ್ ಇಂಜಿನಿಯರಿಂಗ್ ಕಾಲೇಜ್ ಗೆ ಸೇರಿದೆ, ಅಲ್ಲೇ ನನ್ನ ಅತ್ತೆಯ ಮಗ ಶೇಷ ಪ್ರಸಾದ್ ಮಯ್ಯ ಓದುತ್ತಾಯಿದ್ದಿದ್ದ, ಅದೇ ನನ್ನ ಧೈರ್ಯಕ್ಕೆ ಗಜಬಲ ಸಿಕ್ಕಂತಾಗಿತ್ತು ಅವನ ಕೆಲ ಸ್ನೇಹಿತರ ಪರಿಚಯವೂ ಆಗಿತ್ತು .( ಕಾಲೇಜ್ ಜೀವನವನ್ನು ಪ್ರತ್ಯೇಕವಾಗಿ ಬರೆಯುವ ಇರಾದೆ ನನ್ನದು) ಕೊನೆಗೆ ಕುಂದಾಪುರ ಕನ್ನಡ ಮಾತ್ರ ಮಾತನಾಡಲು ಬಲ್ಲವನಾಗಿದ್ದ ನನಗೆ ಅಸಂಖ್ಯಾತ ಗೆಳೆಯರು ಪರಿಚಿತರಾದರು, ಅವರ ಜೊತೆ ಸಂಬಾಷಣೆ ಮಾಡುತ್ತಾ ಮಾಡುತ್ತಾ ಬೆಂಗಳೂರು ಜನರಂತೆ ಮಾತನಾಡಲು ಸಾಧ್ಯವಾಯಿತು.




ಊರಿನಲ್ಲಿ ಸಂಜೆಯಾಗುತ್ತಿದ್ದಂತೆ ಕ್ರಿಕೆಟ್ ಆಡುತ್ತಾಯಿದ್ದಿದ್ದೆ, ಬೆಂಗಳೂರಿಗೆ ಬಂದಮೇಲೆ ಅದು ಮರೀಚಿಕೆ ಆಯಿತು. ಯಾಂತ್ರಿಕ ಜೀವನ ಶೈಲಿ ನನಗೆ ಸ್ವಲ್ಪ ಕಸಿವಿಸಿ ಆನ್ನಿಸ್ತಾಯಿತ್ತು. ಮೊದಮೊದಲು ಹಳೆಯದನ್ನು ಯೋಚಿಸುತ್ತಿದ್ದ ಮನಸ್ಸು ಆನಂತರದ ದಿನದಲ್ಲಿ ಸಂಪೂರ್ಣವಾಗಿ ಪರಿವರ್ತನೆ ಆಯಿತು. ಚಿಕ್ಕಪ್ಪನ ಮಕ್ಕಳ ಜೊತೆ ಆಗೊಮ್ಮೆ ಈಗೊಮ್ಮೆ ಆಡುತ್ತಾಯಿದ್ವಿ. ಒಮ್ಮೊಮ್ಮೆ ನಾವೆಲ್ಲಾ ಕ್ಯಾರಂ ಇಲ್ಲಾ ಪಗಡೆ ಆಡ್ತಾಯಿದ್ದಿದ್ವಿ. ಚಿಕ್ಕಮ್ಮನೂ(ಚಿಕ್ಕಿ) ನಮಗೆ ಸಾತ್ ಕೊಡ್ತಾಯಿದ್ದಿದ್ರು, ಚಿಕ್ಕಪ್ಪ ಪಗಡೆ ಆಡೋಕೆ ಸ್ವಲ್ಪ ಕಡಿಮೆ ಬರ್ತಾಯಿದ್ದದ್ದು. ಅವರಿಗೆ ಕೆಲಸದ ಒತ್ತಡ ಜಾಸ್ತಿ ಇರುತಿತ್ತು. ನಾನು ಬೆಂಗಳೂರಿಗೆ ಬಂದಾಗ ಚಿಕ್ಕಪ್ಪನ ಮಕ್ಕಳು ಸ್ವಲ್ಪ ಚಿಕ್ಕವರಿದ್ದಿದ್ರು, ಚಿಕ್ಕಪ್ಪ ಅಂದ್ರೆ ನನಗೆ ಅಷ್ಟೊಂದು ಸಲಿಗೆ ಇರಲಿಲ್ಲ.. ಇವಾಗ್ಲೂ ಸ್ವಲ್ಪ ಕಡಿಮೇನೆ, ಚಿಕ್ಕಪ್ಪನ ಏನೆ ಕೆಳಬೇಕಾದ್ರು ನನ್ನ ಮಾಧ್ಯಮ "ಚಿಕ್ಕಿ". ನನಗೆ ಕಾಲೇಜ್ ಫೀಸ್ ಕಟ್ಟೋಕೆ ನಾನು ಮೊದಲು ಚಿಕ್ಕಿ ಹತ್ರಾನೆ ಅಪ್ಲಿಕೇಶನ್ ಹಾಕ್ತ ಇದ್ದಿದ್ದೆ. ಚಿಕ್ಕಿ ನನಗೆ ಮೊದಮೊದಲು ಅಷ್ಟೊಂದು ಸಲಿಗೆ ಇರಲಿಲ್ಲ. ದಿನ ಕಳೆದಂತೆ ಚಿಕ್ಕಿ ತುಂಬ ಆತ್ಮೀಯರಾಗಿದ್ರು. ಅದೆಷ್ಟೋ ಬಾರಿ ಜಗಳ ಆಡಿದ್ವಿ ಆಮೇಲೆ ಫ್ರೆಂಡ್ಸ್ ಆಗೋದು ಸ್ವಲ್ಪ ಮುನಿಸ್ಕೊಂಡಿರೋದು, ಮರುದಿನ ಏನು ಆಗಿಲ್ಲ ಅನ್ನೋತರ ಇರ್ತಾ ಇದ್ವಿ. ಇನ್ನು ನೆನಪಿರೋದೆನಂದ್ರೆ ಚಿಕ್ಕಿ ಅಡಿಗೆ ಮನೇಲಿ ಕೆಲಸ ಮಾಡ್ತಿರ್ಬೇಕದ್ರೆ ಹಿಂದಿನಿಂದ ಹೋಗಿ ಕುತ್ತಿಗೆನೋ,ಕಣ್ಣೋ ಮುಚ್ಚಿ ಹೆದರಿಸ್ತಾಯಿದ್ದೆ. ಅಡಿಗೆ ವಿಷಯದಲ್ಲಿ ಚಿಕ್ಕಿನ ಮೀರಿಸೋ ಗೃಹಿಣಿ ಯಾರು ಇಲ್ಲಾ.. ಏನೆ ಹೊಸರುಚಿ ಕಲಿತರು ಅದು ಅಷ್ಟೊಂದು ಅಚ್ಚುಕಟ್ಟಾಗಿ ಮಾಡ್ತಾಯಿದ್ರು, ಎಲ್ಲಾದರು ಸ್ವಲ್ಪ ರುಚಿ ಚೆನ್ನಾಗಿ ಬರ್ಲಿಲ್ಲ ಅಂದ್ರೆ ಅದನ್ನೇ ಯೋಚಿಸ್ತಾ ಇರೋರು, ಮತ್ತೊಮ್ಮೆ ಅಂದ್ಕೊಂಡದನ್ನ ಮಾಡಿ ಕುಶಿ ಪಡ್ತಾಯಿದ್ರು. ಪರಿಪಕ್ವತೆ ಅಂತ ಕರೆಯೋದು ಇದನ್ನೇ, ನಾನು ಯಾವಾಗ್ಲೂ ಅದರ ರುಚಿ ನೋಡೋ ಅದೃಷ್ಟವಂತ, ನನಗಂತೂ ಏನ್ ಮಾಡಿದ್ರು ರುಚಿಯಾಗೆ ಇರ್ತಾಯಿತ್ತು. ಯಾಕೆ ಇವರು ಎಷ್ಟೊಂದು ಕೊರಗುತ್ತಾರೆ ಅನ್ನಿಸೋದು.

ನನಗೆ ಬೆಳಿಗ್ಗೆ ೭ ಗಂಟೆಗೆ ಕಾಲೇಜ್ ಶುರು ಆಗ್ತಾಯಿತ್ತು, ಏನಿಲ್ಲ ಅಂದ್ರು ಬೆಳಿಗ್ಗೆ ೬:೩೦ಕ್ಕೆ ಹೊರಡಬೇಕಿತ್ತು, ದಿನಾ ಹೋಗಿ ಚಿಕ್ಕಿ ನಿದ್ರೆ ಹಾಳ್ ಮಾಡ್ತಾಯಿದ್ದೆ, ಪಾಪ ನಿದ್ದೆಯಿಂದ ಎದ್ದು ತಿಂಡಿ ಮಾಡಿ ಕೊಡೋವುರು. ಒಂದು ದಿನಾನು ಆಗಲ್ಲ ಅಂತ ಹೇಳಿಲ್ಲ. ಭಾನುವಾರ ಬಂತು ಅಂದ್ರೆ ಅವ್ರಿಗೆ ಕುಶಿ. ಆದ್ರೆ ಚಿಕ್ಕಪ್ಪನ ದಿನಚರಿನೆ ಬೇರೆ ಬೇಗ ಎದ್ದು ವಾಕಿಂಗ್ ಹೋಗೋರು. ಮನೇಲಿ ಪ್ರಾಣಾಯಾಮ ಮಾಡೋದು, ದಿನಪತ್ರಿಕೆಯ ಪ್ರತಿಯೊಂದು ಸಾಲನ್ನು ಓದುತ್ತಾ ಇದ್ರು. ಅವ್ರಿಗೆ ಪುಸ್ತಕ ಓದೋದ್ರಲ್ಲು ತುಂಬಾ ಆಸಕ್ತಿ, ಇವಾಗ ಅವ್ರ ಮನೇಲಿ ಒಂದು ಚಿಕ್ಕ ಗ್ರಂಥಾಲಯವಿದೆ. ಚಿಕ್ಕಪ್ಪ ಚಿಕ್ಕಮ್ಮಂದು ಸುಖಿಸಂಸಾರ, ಇಬ್ಬರಲ್ಲೂ ತುಂಬಾ ಅನ್ಯೋನ್ಯತೆ, "ಗ್ರಹಿಣಿ ಗ್ರಹಮುಚ್ಯತೆ" ಅಂತಾರಲ್ಲ ಅದಕ್ಕೆ ನನ್ನ ಚಿಕ್ಕಿ ಹೇಳಿ ಮಾಡಿಸಿದಂತಿದೆ. ಊರಿಂದ ಯಾರೇ ಬರಲಿ ಅವರ ಆತಿಥ್ಯ ಸ್ವಲ್ಪಾನು ಬೇಜಾರಿಲ್ಲದೆ ಮಾಡ್ತಾರೆ ಇವಾಗ್ಲೂ ಅಷ್ಟೇ. ಒಂದು ವಿಷಯ ಹೇಳಲೇಬೇಕು ಚಿಕ್ಕಿಗೆ ತುಂಬಾನೆ ತಲೆನೋವು, ಯಾವಗ್ಲಂದೆ ಆವಾಗ ಬರೋದು. ನಾಮ್ಮ ಹತ್ರ ಮಾತ್ರೆ ತರೋಕೆ ದುಡ್ಡು ಕೊಟ್ಟು ಕಲಿಸೋಳು. ಅವರನ್ನ ಯಾರಾದ್ರೂ ನೋಡಿದ್ರೆ ಏನು ಆಗಿಲ್ಲ ಅನ್ನೋತರಹ ನಟಿಸೋಳು ಆದ್ರೆ ಪಾಪ ಅದೆಷ್ಟು ಸಂಕಟ ಪಡ್ತಾಯಿದ್ರು ಅಂತ ನಮಗೆ ಗೊತ್ತು. ಅವ್ರು ಒಂದು ತರಹ MBBS ಮಾಡದೆಯಿರೋ ಡಾಕ್ಟರ. ಯಾರಾದ್ರೂ ಒಂದು ಮಾತ್ರೆ ಇದೆ ಅಂದ್ರೆ ಕಿವಿ ನೆಟ್ಟಗೆ ಮಾಡ್ಕೊಂಡು ಕೇಳೋರು, ಅರ್ಥಾತ್ ಅಷ್ಟು ಕುತೂಹಲ.

ಪಾನಿ ಪೂರಿ,ಮಸಾಲ್ ಪೂರಿ ಅಂದ್ರೆ ಒಂದು ಮಾರು ದೂರ ಓಡಿ ಹೋಗ್ತಾಯಿದ್ದ ನಾನು ಕಾಲಕ್ರಮೇಣ ಬೆಂಗಳೂರಿನ ಶೈಲಿಗೆ ಬದಲಾದೆ. ಮೊದಮೊದಲು ಇರುಳ್ಳಿ,ಬೆಳ್ಳುಳ್ಳಿ ತಿನ್ನುತ್ತಾಯಿರಲಿಲ್ಲ, ಮನೆಲು ಅಷ್ಟೇ ನನಗೆ ಬೇರೆ ಪದಾರ್ಥ ತೆಗೆದಿಡಬೇಕಿತ್ತು. ಆಮೇಲೆ ಒಮ್ಮೆ ಅದರ ರುಚಿ ನಾಲಿಗೆಗೆ ತಿಳಿದಿರಬೇಕು, ಮತ್ತೆ ಎಂದೂ ಬೇಡ ಅನ್ನುತ್ತಾಯಿಲ್ಲ ನೋಡಿ. ಚಿಕ್ಕಪ್ಪ ಸಂಜೆ ಮನೆಗೆ ಬಂದಾಗ ಅವರ ಮನಸ್ಥಿತಿ ನೋಡಿ ಹೊರಗೆ ಹೋಗೋ ಪ್ರೊಗ್ರಾಮ್ ತಯರಾಗ್ತಯಿತ್ತು. ನಾನು ಬಂದ ಹೊಸತರಲ್ಲಿ ಹೋಗ್ತಾ ಇರಲಿಲ್ಲ ಆಮೇಲೆ ನಿದಾನವಾಗಿ ಅಭ್ಯಾಸ ಅಗೋಯಿತು. ಭಸವೇಶ್ವರ ನಗರದ ಪಾನಿ ಪೂರಿ ಅಂಗಡಿ,ಬೆಣ್ಣೆ ದೋಸೆ ಅಂಗಡಿ ಇನ್ನು ಹಲವಾರು ಹೋಟೆಲ್ ರುಚಿ ನೋಡಿದೆ. ಏನೆ ಹೇಳಿ ಅಲ್ಲಿಂದ ಇಂದಿನ ತನಕ ಅದೆಷ್ಟೋ ಹೋಟೆಲ್ ಊಟ ತಿಂಡಿ ಮಾಡಿದ್ದೇನೆ. ಆದರೆ ಚಿಕ್ಕಿ ಕೈ ಊಟಕ್ಕಿಂತ ಯಾವುದು ರುಚಿಯಿಲ್ಲ. ನಮ್ಮ ಮನೆಗೆ ಯಾರಾದ್ರೂ ಬಂದ್ರೆ ಮುಗಿತು, ಬಗೆ ಬಗೆ ತಿಂಡಿ ತಿನಿಸು ಮನೆಯಲ್ಲೇ ತಯಾರಾಗ್ತಾಯಿತ್ತು.

ಒಮ್ಮೆ ನನ್ನ ಹುಟ್ಟಿದಹಬ್ಬ, ಮನೇಲಿ ಯಾರಿಗೂ ಗೊತ್ತಿಲ್ಲ, ಸಂಜೆ ಅದು ಹೇಗೋ ಚಿಕ್ಕಿಗೆ ಗೊತ್ತಾಯಿತು, ಎಲ್ಲೊ ಹೊರಗೆ ಹೋಗೋಕೆ ಇದ್ದಿತ್ತು, ನಾನೊಬ್ಬನೇ ಮನೇಲಿ ಊಟ ಮಡ್ಬೇಕಾಗಿರೋದಾಗಿತ್ತು. ಹೊರಡೋಕೆ ಸ್ವಲ್ಪ ಮುಂಚೆ ಗೊತ್ತಾದ್ರು, ಹಾಗೆ ಹೋಗೋಕೆ ಮನಸಾಗಿಲ್ಲ. ಬೇಳೆ ಪಾಯಸ ಮಾಡಿದ್ರು. ಅದು ಚೆಂದಾಗಿಲ್ಲ( ಬೇಳೆ ಬುಡ ಸುಟ್ಟಿತ್ತು) ಅಂತ ಅವ್ರೆ ಬೇಜಾರ್ಮಡ್ಕೊಂಡು ಹೋಗಿದ್ರು. ಚಿಕ್ಕಿಗೆ ಹಾಲು ಕಾಯಿಸೋದು ಅಂದ್ರೆ ತುಂಬಾ ಕಷ್ಟದ ಕೆಲೆಸ, ದಿನಕ್ಕೆ ಒಮ್ಮೆಯಾದರು ಹಾಲು ಒಕ್ಕೊದು ಮಾಮೂಲಿ. ಒಂದೇ ಕಡೆ ಸುಮ್ಮನೆ ನಿಲ್ಲೋ ಜಾಯಮಾನವಲ್ಲ ಅವರದ್ದು. ಮುಂದಿನ ವರ್ಷದ ಹುಟ್ಟು ಹಬ್ಬ ನನಗೆ ತಿಳಿದಂತೆ ತುಂಬಾನೆ ವಿಜ್ರಂಭಣೆಯಿಂದಾಯಿತು. ಶಾವಿಗೆ, ಕಾಯಿ ಕಡಬು,ಉಂಡ್ಳುಕಾಯಿ, ಬೋಂಡ ಮತ್ತು ಪಾಯಸ ಮಾಡಿದ್ರು.ಹಬ್ಬ ಹರಿದಿನಗಳು ಬಂದ್ರೆ ನಮಗೆ ಸಡಗರ. ಏನು ವಿಶೇಷ ಮಾಡ್ತಾರೆ ಅನ್ನೋ ಕುತೂಹಲ, ಒಮ್ಮೊಮ್ಮೆ ಏನು ಹೆಸರು ಅಂತ ನಿರ್ಧಾರವಾಗೋದು ತಿನ್ನೋ ಸಮಯ ಬಂದಾಗ. ( ಹ ಹ ಹ ). ದೀಪಾವಳಿ ಆಚರಣೆ ಎಂದೂ ಮರೆಯದ ನೆನಪು. ನಮಗೆಲ್ಲ ಹೊಸಬಟ್ಟೆ ಕೊಡಿಸೂರು. ಬೆಳಿಗ್ಗೆ ಬೇಗ ಅಭ್ಯಾಂಗ ಸ್ನಾನ ಆಗೋದು, ನಮಗೆಲ್ಲ ಎಣ್ಣೆ ಹಚ್ಚಿ ಬೆನ್ನುಜ್ಜಿ ಸ್ನಾನ ಮಾಡಿಸೋರು. ಚಿಕ್ಕಮ್ಮನ ವಾತ್ಸಲ್ಯಕ್ಕೆ ಸಾಟಿಯಿಲ್ಲ. ಲಕ್ಷಿ ಪೂಜೆ ದಿನ ಚಿಕ್ಕಪ್ಪನ ಆಫೀಸ್ ಪೂಜೆ. ಮಧ್ಯಾಹ್ನ್ನ ಮನೇಲಿ ಗಡಜ್ ಊಟ, ಸಂಬಂದಿಕರೆಲ್ಲರನ್ನು ಕರೆಯುತ್ತಿದ್ರು. ಇವಾಗ್ಲೂ ಅಷ್ಟೇ.

ಸಂಜೆಯ ಸಮಯ ಸವಿಯಾದ ಟೀ ಕುಡಿಯುತ್ತ ಚಿಕ್ಕಿ ಮತ್ತೆ ಸೋದರತ್ತೆ ಹತ್ರ ಹರಟೆ ಹೊಡಿತಾಯಿದ್ದೆ. ನನಗೋ ಕಾಲೇಜ್ ಲಿ ನಡಿಯೋ ಪ್ರತಿಯೊಂದು ಘಟನೆ ಹೇಳೋಕೆ ಆಸಕ್ತಿ. ನಾನು ತಿಳಿದಂತೆ ನನ್ನ ಗೆಳೆಯರೆಲ್ಲರ ಬಗ್ಗೆನು ಚಿಕ್ಕಿಗೆ ಗೊತ್ತು. ನಾನು ಏನಾದ್ರು ತಪ್ಪು ಮಾಡಿದ್ರೆ ನನ್ನ ತಿದ್ದಿದ್ದು ಅವ್ರೆ ಅಂದ್ರೆ ತಪ್ಪಲ್ಲ. ನನಗೆ ಏನಾದ್ರು ನಿರ್ಧಾರ ತಗೊಳ್ಳೋಕೆ ಗೊಂದಲವಾದ್ರೆ ಚಿಕ್ಕಿನೆ ಜಡ್ಜಮ್ಮ. ಕೆಲವೊಮ್ಮೆ ಮಾವ ಬೇಗ ಬರೋರು, ಅವರ ಮನೇನು ಹತ್ರಾನೆ ಇದ್ದಿತ್ತು. ಮಾವ ಬಂದ್ರೆ ಹಳೆಕಾಲದಿಂದ ಕಥೆ ಶುರು ಮಾಡೋರು, ಸಮಯ ಹೋಗೋದೇ ತಿಳಿತಾಯಿರಲಿಲ್ಲ.ಕ್ರಿಕೆಟ್,ರಾಜಕೀಯ ಮತ್ತು ದೈನಂದಿನ ಜೀವನದ ಸಮಾಚಾರ ನಮಗೆ ಚರ್ಚೆಯ ವಿಷಯ.

ನಾನು ಮೊದಲಬಾರಿ ತಿರುಪತಿಗೆ ಭೇಟಿ ಕೊಟ್ಟಿದ್ದು ಅದೇ ಸಮಯದಲ್ಲಿ, ಚಿಕ್ಕಿಯ ಹರಕೆ ಇತ್ತು ಬೆಟ್ಟ ಹತ್ಕೊಂಡೆ ಹೋಗೋದು ಅಂತ. ಚಿಕ್ಕಿ ಯಾವಾಗ್ಲೂ ಹರಕೆ ಹೊರೋದ್ರಲ್ಲಿ ಮುಂದೆ. ನಾವೆಲ್ಲಾರು ನಡ್ಕೊಂಡು ಹೋಗಿದ್ದು. ಅದೊಂದು ಅವಿಸ್ಮರಣೀಯ ದಿನ. ಮೇಲೆ ವೆಂಕಟೇಶನ ದರ್ಶನ ಮಾತ್ರ ತುಂಬಾ ದುಸ್ತರವಾಗಿತ್ತು, ೬ ಗಂಟೆ ಸಾಲಲ್ಲಿ ನಿಲ್ಲೋದ್ರಲ್ಲಿ ನಾವೆಲ್ಲಾ ಸುಸ್ತು. ಇನ್ನೊಮ್ಮೆ ಭನಶಂಕರಿ ದೇವಸ್ತಾನಕ್ಕೆ ಹರಕೆ ತೀರಿಸೋಕೆ ಹೋಗಿದ್ವಿ. 205 ನಂಬರ್ ಬಸ್ಸಲ್ಲಿ ಹೋಗಿ ದರ್ಶನ ಮಾಡಿ, ಪೂಜೆ ಕೊಟ್ವಿ, ವಾಪಸ್ ನಾನು ಬೇರೆ ಎಲ್ಲೊ ಹೋಗಬೇಕಿತ್ತು, ಯಾವತ್ತು ಒಬ್ರೇ ಬಸ್ಸಲ್ಲಿ ಹೋಗದ ಚಿಕ್ಕಿ ಆವತ್ತು 205a ನಂಬರ್ ಬಸ್ ಹತ್ತಿ ಹೊರಟರು, ಅವರ ದುರಾದ್ರುಷ್ಟ ಅದು ಬೆಂಗಳೂರಿಗೆ ಒಂದು ಸುತ್ತು ಹಾಕಿ ಬಂತು. ನನಗೆ ತುಂಬಾ ಬೇಜಾರಾಗಿತು. ನಾನು ಸ್ವಲ್ಪ ವಿಚಾರಿಸಬಹುದಿತ್ತು ಅಂತಾ ಆಮೇಲೆ ಕಲಿತೆ.

ನನಗೆ ಇಂಜಿನಿಯರಿಂಗ್ ಮುಗಿದು Perot systems (ಡೆಲ್ ಸೇರ್ವಿಸೆಸ್) ಕಂಪನಿಯಲ್ಲಿ ಕೆಲಸ ಸಿಕ್ಕಿತು. ಆಫೀಸ್ ಹತ್ರಾನೆ ಮನೆ ಬದಲಾಯಿಸೋ ಚಿಂತನೆಗಳು ಪ್ರಾರಂಬವಾದವು. ಇಷ್ಟೊಂದು ಸುಮಧುರ ನೆನಪುಗಳ ಗೂಡಿಂದ ಹೊರಹೋಗಲು ಯಾವ ಹಕ್ಕಿಯೂ ಇಷ್ಟಪಟ್ಟಿರಲಿಕ್ಕಿಲ್ಲ.ಸಿಹಿಯಾದ ಜೀನುಗೂಡಿಂದ ಹಾರಿ ಹೋಗುವ ಕಾಲ.ಬ್ರಹ್ಮಚಾರಿಯ ಹೊಸ ಕುಟೀರದ ಉದ್ಗಾಟನೆ. ಸಿದ್ದಾಪುರದಲ್ಲಿ ೩ನೆ ಅಂತಸ್ತಿನಲ್ಲಿ ಒಂದು ಚಿಕ್ಕ ಮನೆ ಹುಡುಕಿದೆವು. ನೋಡ ನೋಡುತಿದ್ದಂತೆ ಮನೆಗೆ ಹೋಗುವ ದಿನ ಬಂದಿತು, ಅಲ್ಲೋಲ ಕಲ್ಲೋಲವಾದ ಮನಸ್ಸು ಕಲ್ಲಾಗಿ ಪರಿವರ್ತನೆಯಾಗ ಬಯಸಿತು, ಎಷ್ಟಾದರೂ ಅನ್ನದ ಋಣ, ರಕ್ತಸಂಬಂದದ ಆಕರ್ಷಣೆ. ಮನವು ತಾ ಬರಲಾರೆ ಅನ್ನಲು ಕಣ್ಣು ತಾ ಒಂದುಹನಿ ಸಿಂಚನ ಮಾಡಿರಲು. ಹೋರಾಟ ಮಾಡಿ ಬದುಕುವ ಆಲೋಚನೆಗೆ ಹಿನ್ನಡೆ.  ಮನೆಯಿಂದ ನನ್ನ ಸಾಮಾನುಗಳ ಹೊತ್ತು ಹೊರಡುವ ಸಮಯ. ನಾನು ಚಿಕ್ಕಪ್ಪ,ಚಿಕ್ಕಮ್ಮನಿಗೆ ನಮಸ್ಕರಿಸಿ ಹೊರಟೆ. ನಿಮ್ಮ ಆಶೀರ್ವಾದದ ಬಲವೊಂದಿದ್ದರೆ ಆಶಾ ಗೋಪುರವ ಕಟ್ಟೇನು ಅನ್ನುವ ಛಲ. ಬಾಗಿಲ ಬಳಿ ನಿಂತು ದೂರದ ಬೆಟ್ಟವ ನೋಡಿ ನಾ ಬರುವೆ ಅನ್ನಲು ಹೇಳಲಾಗದ ನೋವು. ಅತ್ತ ಚಿಕ್ಕಿ ನನ್ನ ಅಕ್ಕನಿಗೆ ಫೋನ್ ಮಾಡಿ ನನಗೆ ದೈರ್ಯ ತುಂಬಲು ಹೇಳ್ತಾ ಇದ್ರು. ಮದ್ಯದಲ್ಲಿ ಚಿಕ್ಕಿಯ ದ್ವನಿ ನಿಂತಿತು ಕಣ್ಣಿನಲ್ಲಿ ಮೌನವಾಗಿ ನರ್ಮದೆ ಸುರಿಯುತ್ತಿದ್ದಿದಳು. ನಾಲ್ಕು ವರ್ಷ ತನ್ನ ಮಕ್ಕಳಂತೆ ನೋಡಿಕೊಂಡ ಹೃದಯ, ಹೋಗುವುದು ಮೊದಲೇ ತಿಳಿದಿದ್ದರೂ ಸಹಿಸಲಾರದ ವೇದನೆ. ನಿಮಿಶಾರ್ದದಲಿ ಬಂದಿರಬಹುದಾದ ಯೋಚನಾ ಲಹರಿ ಆ ನಾಲ್ಕು ವರುಷದ ಸಿಹಿ ಕಹಿ ನೆನಪನ್ನ ಮೇಳೈಸಿದೆ. ಇತ್ತ ಹೊರಟ ನಾನು "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನನ್ನನು" ಅಂತ ಕಣ್ಣನ್ನು ತೇವ ಮಾಡಿಕೊಂಡು ಬಾರವಾದ ಹೆಜ್ಜೆಯನಿಟ್ಟು ಮುಂದೆ ಸಾಗಿದೆ.ನನ್ನೆರಡು ಕಾಲುಗಳು ನೀ ಮುಂದೆಸಾಗು ಅಂತ ಕಿತ್ತಾಡುತ್ತಿವೆ, ಪ್ರತಿದಿನ ಸಾಗುವ ರಸ್ತೆಯು ಇಂದು ನನ್ನ ಮೌನಕ್ಕೆ ನೊಂದು ಕೊರಗುತ್ತಿದೆ. ತಂಪುಗಾಳಿಯು ನನ್ನನ್ನು ಬಿಗಿದಪ್ಪಿ ಸಂತೈಸುತ್ತಿದೆ. ಸೂರ್ಯ ತಾ ನೋಡಲಾರದೆ ಮೋಡದಲ್ಲಿ ಮರೆಯಾಗಿದ್ದಾನೆ.

ನನ್ನಿಂದ ಅದೆಷ್ಟೋ ಬಾರಿ ನೊಂದು, ಆಪಾದನೆ ಕೇಳಿರುವ ತಾಯಿ ಹೃದಯ. ನನಗಾಗಿ ಒಮ್ಮೆ ಮಿಡಿದಿರುವುದನ್ನ ಗಮನಿಸಿ ಆನಂದ ಪಡಲೇ ? ಇಲ್ಲ ನನ್ನಿಂದ ಒಂದು ಹನಿ ಕಣ್ಣೀರು ಸುರಿಯಿತಲ್ಲಾ ಅಂತ ವೇದನೆ ಪಡಲೇ ? ನನಗೆ ಕೆಲವು ಸಂದರ್ಭದಲ್ಲಿ ಅನ್ನಿಸೋದು, ಎಷ್ಟೊಂದು ಸಹಾಯ ಮಾಡಿದ, ಇಂದು ನಾನು ಈ ಹಂತಕ್ಕೆ ಬರೋಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಿದವರಿಗೆ ಏನಾದ್ರು ಕೊಡಬೇಕು ಅಂತ. ಯೋಚಿಸಿ ಯೋಚಿಸಿ ಸಮಯ ಸಂದಿಸಿದೆ ಹೊರತಾಗಿ ಯಾವುದೇ ಪ್ರಯೋಜನವಾಗಿಲ್ಲ. ಶಿಲೆ ತಾನು ಶಿಲ್ಪವಾಗಿ ಮಾರ್ಪಡಲು ಶಿಲ್ಪಿ ಕಾರಣನಾಗುತ್ತಾನೆ ಇಲ್ಲ ಅಂದಿದ್ರೆ ಅದೊಂದು ಬರಿ ಕಲ್ಲಾಗಿರುತ್ತಿತ್ತು. ಶ್ರೇಷ್ಠತೆ ಶಿಲ್ಪಿಗೆ ಸೇರಬೇಕು.

:- Sridhar Aithal D

Wednesday, July 11, 2012

ಚಿಕ್ಕಿ



ಮಾಸದ ನೆನಪು ಚಿಕ್ಕಪ್ಪನ ಮನೆಯಲ್ಲಿನ ದಿನವು,
ಮೋಸವೇ ಇಲ್ಲದ ಪ್ರೀತಿಯ ಚಿಕ್ಕಮ್ಮನ ಮನವು,
ತಮ್ಮಂದಿರ ಜೊತೆಗೆ ನನ್ನ ವಿದ್ಯಾಭ್ಯಾಸದ ಹಸಿವು,
ನಂದಗೋಕುಲದಲ್ಲಿ ಕಳೆದ ಆ ನಾಲ್ಕು ವರುಷವು !!

ನೆನಪಿನ ಪುಟಗಳ ಮಧ್ಯದಿ ಸಾಲಾಗಿ ಸೇರಿದೆ,
ಕನಸಿನ ಕಲ್ಪನೆಗೆ ಒಂದಷ್ಟು ಸೆಲೆಯಾಗಿ ಸಿಗದೆ,
ಮನಸಿನ ಬಾವನೆಯ ನೆಲೆಯಾಗಿ ಸಂಬಂದಿಸಿದೆ,
ಬದುಕಿನ ಸರಪಳಿಯ ಸಿಹಿಜೇನ ಹನಿಗಳಾಗಿದೆ !!

ಹಾಲಿನಂತಹ ಮನಸ್ಸು ಹೇಳಲೇನಿದೆ ಹೊಸತು,
ಕಣ್ಣ ಮೇಲಿನ ಕಾಂತಿ ವೈಮನಸ್ಸಿಗೆ ವಿಶ್ರಾಂತಿ,
ಸಣ್ಣ ತನವು ನಾಸ್ತಿ, ಪ್ರೀತಿ ವಿಶ್ವಾಸವೇ ಜಾಸ್ತಿ,
ನನ್ನ ಚಿಕ್ಕಿಯ ಆಸ್ತಿ ಮುಗುಳ್ನಗುವಿನೊಂದಿಗೆ ಕುಸ್ತಿ !!

ಮರೆಯಲಾಗದು ಚಿಕ್ಕಿ ನೀ ಕೊಟ್ಟ ಅಕ್ಕರೆ,
ಮೀರಿಸಲಾಗದು ಯಾರೂ,ನಿನ್ನ ನುಡಿ ಸಕ್ಕರೆ,
ಸಹಿಸಲಾರೆವು ಎಂದಿಗೂ ಇನ್ನು ನೀನು ಅತ್ತರೆ,
ನೋಡುವೆವು ಸ್ವರ್ಗವ ಸದಾ ನೀನು ನಗುತಿರೆ !!

ಶಾಂತಲ



ಮನಸ್ಸು ನಿನ್ನದು ಬಹಳ ವಿಶಾಲ,
ನಿರ್ಧಾರದಲ್ಲಿ ನೀನಿರುವೆ ಬಲು ಅಚಲ,
ಹಸನ್ಮುಖಿ ನೀನೆಂದೂ ಇರಲಾರೆ ಚಂಚಲ,
ಅದಕ್ಕೆ ಕರೆಯುವರು ನಿನ್ನನು “ಶಾಂತಲ” !!

ಅಪರೂಪಕೆ ಚಿಮ್ಮುವ ಚೆಲುವು,
ಮನಮೋಹಕ ಕಾಂತಿಯ ನಿಲುವು,
ಮೈಮನ ರೋಮಾಂಚನ ಸ್ವರವು,
ಸದಾ ಕೆಳಬಯಸಿದೆ ನಮ್ಮೀ ಮನವು !!

ನೋಡಿಲ್ಲ ಯಾರಲ್ಲೂ ನಿನ್ನಯ ಹಗೆತನ,
ಸ್ತ್ಯರ್ಯಳಿಗೆ ಒಲಿದಿದೆ ನಿನ್ನಯ ತಾಯ್ತನ,
“ಹರಿ”ಗೆ ಲಬಿಸಿದೆ ನಿನ್ನಯ ಒಡೆತನ,
ಸದಾ ಬೆಳಗಲಿ ನಿಮ್ಮ ಈ ಮನೆತನ !!

ನಾವಿರೋದೆ ಹೀಗೆ



ಇದು ನನಗು ನಿನಗೂ ತಿಳಿಯದೆ ಆದ ಪ್ರೀತಿ,
ಒಂದರ ಮೇಲೆ ಒಂದು ಬಯಕೆ ಬಂದ ರೀತಿ,
ತಡವಾಗಿ ಬಂದಾಗ ನೀನು ಕೊಟ್ಟ ರಿಯಾಯಿತಿ,
ಮರೆತೇ ಹೋಗಬೇಕೆ ಮರುದಿನ ಈ ನನ್ನ ಮತಿ !!

ಎಷ್ಟಾದರೂ ನೀನಲ್ಲವೇ ನನ್ನ ಪ್ರೀತಿಯ ಸತಿ,
ಅದಕೆ ಕಾಡಿದೆ ನಿನ್ನನು ಪ್ರತಿಯೊಂದು ಸರ್ತಿ,
ಮೊದ ಮೊದಲು ಅಂಜಿಕೆ ತಂದದ್ದು ನನ್ನ ಕೀರ್ತಿ,
ಆಮೇಲೆ ಬಿಡದೆ ಕೊಟ್ಟೆಯಲ್ಲ ಮುದ್ದಿಸುವ ಸ್ಫೂರ್ತಿ !!

ಮರೆಯದೆ ನೆನೆಯಬೇಕು ನೀನ್ನೊಂದಿಗಿನ ಆ ಕ್ಷಣ,
ಅರಿತರೆ ಆಗುವುದು ಮನದಲ್ಲೇ ಒಂತರಾ ತಲ್ಲಣ,
ಅಚ್ಚರಿ ತರುವ ಜಗಳವೇ ಸಾಮಾನ್ಯ ನಮ್ಮ ನಡುವಣ,
ಮದುವೆ ಆದರೂ ಬದಲಾಗದು ನಮ್ಮಿಬ್ಬರ ಈ ಹೆಗ್ಗುಣ !!

Wednesday, July 4, 2012

ನಾರಿ

ಓ ನನ್ನ ಪ್ರೀತಿಯ ಮದನಾರಿ.
ಇಷ್ಟ್ಯಾಕೆ ಕಾಡುತ್ತಿರುವೆ ಪ್ರತಿಸಾರಿ..
ಮರೆಯಲಾರೆ ನಿನ್ನ ಓ ನನ್ನ ಪೋರಿ...
ಬರೆದಿರುವೆನು ನಿನಗಾಗಿ ಎಷ್ಟೊಂದು ಸ್ಟೋರಿ....

ಹಾಡಿ ಹೊಗಳುವೆ ನಿನ್ನ ಮೈಸಿರಿ.
... ಹೊತ್ತಾಯಿತು ಮಲಗುವೆನು ಸಾರಿ..
ಮುದ್ದಾಡುವೆ ನಿದ್ದೆಯಲಿ ಓ ನನ್ನ ಚಕೋರಿ...
ಪಿಸುಮಾತಲಿ ಹೇಳುವೆನು ರಾಜರಾಣಿ ಸ್ಟೋರಿ....

ಹೋಗುವೆ ನಾನಿನ್ನು ಚಿತ್ತಚೋರಿ.
ಮುಂದೆಂದೂ ಸಿಗದಿರುವೆ ಎಂದೆನಿಸಿದೆ ಸಾರಿ..
ಮದುವೆಯಾಗಿ ಸುಕವಾಗಿರು ಓ ನನ್ನ ಮನಸಿರಿ...
ಮನತುಂಬಿ ಹಾಡುವೆನು,ನಿನ್ನಯ ಮ್ಯಾರೇಜ್ ಸ್ಟೋರಿ...

:- Sridhar Aithal D