Monday, December 31, 2012

ಒಮ್ಮೆ

ಗುರು ಸಾಕ್ಷಾತ್ ಪರಬ್ರಹ್ಮ
ವಿದ್ಯಾರ್ಥಿಯ ಅಧ್ಯಯನದಿ ಒಮ್ಮೆ
ಭಕ್ತಿಯ ನವ್ಯ ಚಿಂತನ !!

ಭವತಿ ಭಿಕ್ಷಾಂ ದೇಹಿ
ಭಿಕ್ಷಾರ್ಥಿಯ ಉದರದಲ್ಲಿ ಒಮ್ಮೆ
ಬಯಕೆಯ ಭವ್ಯ ಭೋಜನ !!

ಮಾಂಗಲ್ಯಂ ತಂತುನಾನೇನ
ಕನ್ಯಾರ್ಥಿಯ ಕನಸಲ್ಲಿ  ಒಮ್ಮೆ
ಸಂಕೋಚದ ನವ್ಯ ನರ್ತನ !!

ಭಜ ಗೋವಿಂದಂ ಭಜ ಗೋವಿಂದಂ
ಮೋಕ್ಷಾರ್ಥಿಯ ಮನಸಲ್ಲಿ ಒಮ್ಮೆ
ಸಂಸಾರದ ನಿತ್ಯ ಜೀವನ !!


Wednesday, December 26, 2012

ನಯನ
ಅಕ್ಕ ಪಕ್ಕವೇ ಮನೆ ಮಾಡಿರುವ
ಒಂದರಂತೆ ಇನ್ನೊಂದು ಕಂಗೊಳಿಸುವ
ಅನ್ಯೋನ್ಯತೆಗೆ ಬೆರಗಾಗಿ ನಾನೇನ ಕರೆಯಲಿ ?

ಬಾಹ್ಯ ಸೌಂದರ್ಯಕ್ಕೆ ನೀನೆ ಸಾಕ್ಷಿ
ಮನಸಿನ ಆಂತರ್ಯಕ್ಕೆ ನೀನಲ್ಲವೇ ಅಕ್ಷಿ 
ಸುಖ ದುಃಖದಲ್ಲೂ ನೀನು ಸಾಮಾನ್ಯ ಪಕ್ಷಿ   !!

ನಕ್ಕಾಗ ಶೋಬಿಸುವ ಅತ್ತಾಗ ಮರಗುವ
ಸುತ್ತಲೂ ನೋಡುವ ನಿನ್ನಯ ಹೊಳಪಿನ ಕಾಂತಿಯ
ತುಂಟ ಕಣ್ಣಿನ ನೋಟಕ್ಕೆ ತಟ್ಟನೆ ಮನಸೋಲದವರಾರು ?

Saturday, December 15, 2012

ಮೊದಲರಾತ್ರಿ

ನನ್ನದೇ ಮಂಚದಲಿ 
ನಮ್ಮನೆಯ ಹಾಸಿಗೆಯಲಿ 
ಮಲ್ಲಿಗೆಯ ಬೆಳಸಿದವರಾರು ?
 
ನವಿಲಿನ ನಡಿಗೆಯಲಿ
ನುಡಿಮುತ್ತು ಸುರಿಸುತ್ತ
ಮೊದಲರಾತ್ರಿಗೆ ಬಂದವಳಾರು? 
 
ನನ್ನುಸಿರ ತೇರಿನಲಿ 
ನನ್ನಾಕೆಯ ಬೆವರಿನಲಿ 
ಸುಗಂಧವ ಸುರಿಸಿದವರಾರು ?
 
ನಾನೊಂದು ಕೇಳಿರಲು
ನೂರೊಂದು ಕೊಟ್ಟವಳ
ಮೈ ಬಿಸಿಮಾಡಿಸಿದವರಾರು ?
 
ನೂರಾರು ಕನಸಿನಲಿ  
ನಗುತ ಬಂದವಳ ಬಳಿಯಲಿ
ಸುಮ್ಮನೆ ಮಲಗುವವರಾರು ?
 
 
 

Monday, December 10, 2012

ಘಟನೆಗಳು

ಕಾಲದ ಪರಿಧಿಯಲಿ ಮರೆತೇ ಹೋದ
ಕೆಲವೊಂದು ದಿನಗಳು ಚಿಟ್ಟೆಯಂತೆ
ಹಾರಿ ಬಂದು ನೆನಪಿಸಿ ಹೃದಯವನ್ನೇ
ಎಡಬಿಡದೆ ಘಾಸಿಗೊಳಿಸುತಿದೆ ಕಾಣ !!

ಹೆಜ್ಜೆ ಹೆಜ್ಜೆಯಲ್ಲೂ ಅವಳ ಗೆಜ್ಜೆ ಸದ್ದು
ಕ್ಷಣ  ಕ್ಷಣಕ್ಕೂ ಬೀಳುವ ಬಳೆಗಳ ಗುದ್ದು
ಹತ್ತಿರ ಬಂದಾಗ ಬಿಸಿ ಉಸಿರ  ಮುದ್ದು
ಕಣ್ಣುಗಳೇ ವಂಚಿಸಿ ನೋಡುತಿತ್ತು ಕದ್ದು !!

ಪ್ರೇಮಕಾವ್ಯದಲ್ಲೂ ಇರಲಾರದ ವಿರಹ
ಇರುವೆಗೂ ತಿಳಿಯದ ನಮ್ಮ ಕಲರವ
ಮುಂಜಾವಿನ ಮಂಜಿನಂತೆ ಹನಿಗಳು
ಮುಖದ ತುಂಬಾ ಜೇನಿನ ಇಬ್ಬನಿಗಳು !!

ಒಂದೇ ಎರೆಡೆ ಅನುದಿನ ಇಂಥಹವು
ಅನೇಕ ಸಿಹಿನೆನಪುಗಳ ಮೆರವಣಿಗೆಯು
ವಾಸ್ತವಕ್ಕೂ,ಕಲ್ಪನೆಗೂ ಮಧ್ಯೆ ಅನಂತ
ವ್ಯತ್ಯಾಸ ತಂದು ಸಾಗುತಿರೆ ದಿಗಂತಕೆ !!

Thursday, December 6, 2012

ಮುಪ್ಪು
ಬಾಳ ಇಳಿ ಸಂಜೆಯಲಿ
ಮೂಡಿದೊಂದೊಂದು ಕನಸು
ಮನಸಿನ ಸುಪ್ತ ಭಾವನೆಯ
ಅಲ್ಲೋಲ ಕಲ್ಲೋಲ ಗೊಳಿಸಿತೇಕೆ ?

ತುಂಬಿದ ಮನೆಗೆ ಕತ್ತರಿ
ನುಂಗಲಾರದ ತುತ್ತು ತಟ್ಟೆಯಲಿ
ಆಳುವ ನನ್ನೀ ಕೈಗಳೇ ಅಂದೇಕೆ
ಅಳುವ ಕಣ್ಣಿನ ಮೇಲೆ ನರ್ತಿಸುತಿದೆ ?

ಆರದ ಆಸ್ತಿಯ ಬಯಸದೆ
ಕೊಟ್ಟಮೆಲೂ, ತೀರದ ಆಯುಷ್ಯಕ್ಕೆ
ಜರಿದು ಮೂಲೆಗುಂಪಾಗಿಸುವ ಪ್ರಯತ್ನಕೆ
ಹಿರಿಯ ಜೀವವದು ಕುಗ್ಗಿ ನೊಂದಿತೇಕೆ ?

ಮುಪ್ಪಿನ ಬಂದನಕ್ಕೆ ನೆಚ್ಚಿ
ಮಕ್ಕಳ ಪ್ರೀತಿಯ ಆರೈಕೆಯಲಿ
ಉಳಿದ ನಾಲ್ಕುದಿನ ಕಳೆಯುವ
ಸದ್ಬಯಕೆಗೆ ತಿಲಾಂಜಲಿ ಬಿಟ್ಟಿರಬೇಕೆ ?

Tuesday, December 4, 2012

ಸಂಸ್ಕೃತಿಯುಗವೊಂದು ಕಳೆದಂತೆ ಕಾಣಿಪುದು ನೋಡಿರ
ಮಗುತಾನು ಬದಲಾಗಿಪುದು ವೇಷಭೂಷಣದಲಿ
ನಡುನಡುವೆ ಸುಳಿದಾಡುವ ಆಂಗ್ಲಪದ ಪುಂಜದಲಿ
ಹೆತ್ತವರ ದೂರಮಾಡಲು ಹೇಸದ ಕಾಲಘಟ್ಟದಲಿ !

ವ್ಯಕ್ತಿ ವ್ಯಕ್ತಿಯ ಮಧ್ಯೆ ನಂಬಲಾರದ ಬದಲಾವಣೆ
ಸಾಗುತಿಹ ಪಾಶ್ಚಿಮಾತ್ಯಕ್ಕೆ ನಮ್ಮ ಹೊಂದಾಣಿಕೆ
ಮನೆಯ ಗೋಡೆಯ ತುಂಬಾ ವಾಸ್ತು ಲಾಂಛನ
ಕಾಣದಾಗಿದೆ ಪ್ರೀತಿ ಪಾತ್ರರ ಛಾಯಚಿತ್ರ ಪ್ರದರ್ಶನ !

ದೇವರಿಗೂ ಸಿಗದಾಗಿದೆ ಮನೆಯ ಮೂಲೆಯ ಜಾಗ
ಶೌಚಾಲಯಕ್ಕೆ ಮಾತ್ರ ಪ್ರತಿ ಕೋಣೆಯಲ್ಲೂ ವ್ಯವಸ್ತೆ
ಮನೆಯ ಹಿಂದಿನ ಹಿತ್ತಲು ಕತೆಗೆ ಮಾತ್ರ ಸೀಮಿತ
ತುಳಸಿ ಗಿಡಕ್ಕೆ ಜಾಗ ಸಿಗುವುದೇ ಒಂದು ಸೋಜಿಗ !

ಸದಾ ವಿಚಿತ್ರವೆನಿಸುವ ಜೀವನ ಪಂಜರವಿದು ಕಾಣ
ಅನುಕಂಪ ಆತ್ಮೀಯತೆ ತಿಳಿಯದ ಮನುಜ ಗಣ
ಕಾಂಚಾಣದ ಹಿಂದೆ ಓಡುತಿದೆ ಮೌಲ್ಯದ ಗುಣ
ಏಂದು ಬದಲಾಗುವುದೋ ಈ ಭಾರತೀಯನ ಮನ !!