Friday, July 13, 2012

ಆತ್ಮ ಕತನದಲ್ಲಿ ಒಂದು ಇಣುಕು ನೋಟ

ಆತ್ಮೀಯರೇ,

ಬಾಲ್ಯದಿಂದ ಪ್ರೌಡಾವಸ್ಥೆಗೆ ತಲುಪಿದ ಸಮಯವೂ ಪ್ರತಿಯೊಬ್ಬ ಮನುಷ್ಯನನ್ನು ಬದಲಾವಣೆಯ ಪಥಕ್ಕೆ ಕರೆದೊಯ್ಯುತ್ತೆ ಅನ್ನುತ್ತಾರೆ. ಈ ಸಮಯ ಅಷ್ಟೊಂದು ಮಹತ್ವ ಪಡೆಯಲು ಬಹಳಷ್ಟು ಕಾರಣಗಳಿರಬಹುದು ಆದರೆ ಇದು ಬಹುಮುಖ್ಯವಾಗಿ ನಮ್ಮ ಭವಿಷ್ಯವನ್ನು ನಿರ್ಧರಿಸುವ ,ವಿಧ್ಯಾಬ್ಯಾಸ ಮತ್ತು ಉದ್ಯೋಗ ಪಡೆಯುವ ಮುಖ್ಯ ಘಟ್ಟ. ನಾವು ಕಲಿಯುವ ಅಥವಾ ಮ್ಯಗೂಡಿಸಿಕೊಳ್ಳುವ ಪ್ರತಿಯೊಂದು ಗುಣ ಲಕ್ಷಣವು, ಹಾವ ಭಾವ, ನಡೆ ನುಡಿ ಮತ್ತು ಸಂಸ್ಕಾರ ಇಲ್ಲಿ ನಿರ್ಧರಿಸಲ್ಪಡುತ್ತೆ. ನನ್ನ ಬದುಕಿನ ಈ ನಾಲ್ಕು ವರುಷದ ಸುಮಧುರ ದಿನಗಳನ್ನು ನನ್ನ ನೆನಪಿನ ಗೂಡಿಂದ ಬಿಚ್ಚಿಡುತ್ತಿದ್ದೇನೆ. ವ್ಯಕ್ತಿಗತವಾದ ನನ್ನ ನಿರ್ಧಾರ ನಿಮಗೆ ಸರಿಕಾಣಿಸದಿದ್ದಲ್ಲಿ ಅಥವಾ ಇಷ್ಟವಾಗದಿದ್ದಲ್ಲಿ ಅದನ್ನ ಇಲ್ಲೇ ಮರೆತುಬಿಡಿ. ಇಲ್ಲಿ ಬರೆಯಲ್ಪಡುವ ಪ್ರತಿಯೊಂದು ವಿಷಯವು ನಾ ಕಂಡ ಅಥವಾ ನಾನು ಅರ್ಥೈಸಿಕೊಂಡ ಮಾರ್ಗವಾಗಿರುತ್ತೆ. ಕೆಲವೊಂದು ವಿಚಾರವನ್ನು ನಾನು ಮರೆತಿರಬಹುದು ಅಂತದ್ದು ಮುಂದೆ ನೆನಪಾದಲ್ಲಿ ಕೊಂಡಿ ಹಾಕಿ ಜೋಡಿಸುವ ಪ್ರಯತ್ನ ಮಾಡುತ್ತೇನೆ... ಇದೋ ಸುಮಾರು ಇಂದಿಗೆ ಹತ್ತು ವರ್ಷಗಳ ಹಿಂದೆ..

ನಾನು II PUC/CET ಪರೀಕ್ಷೆಯಲ್ಲಿ ಉತ್ತಿರ್ಣನಾದ ಸಂಭ್ರಮ ಒಂದು ಕಡೆಯಾದರೆ, ಮುಂದೆ ಏನು ಮಾಡೋದು ಅನ್ನುವ ತಳಮಳ. ಕುಂದಾಪುರದ ಪ್ರತಿಷ್ಟಿತ ಪುರೋಹಿತ ವಂಶದಲ್ಲಿ ಜನಿಸಿದ ನನಗೆ ವಂಶಪಾರಂಪರ್ಯದ ಉದ್ಯೋಗದ ಕಡೆಗೆ ಹೊಗೋದ ಅಥವಾ ವ್ರತ್ತಿ ಶಿಕ್ಷಣದ ಕಡೆಗೆ ಹೊಗೋದ ಅನ್ನೋದರಲ್ಲೇ ಗೊಂದಲ. ಒಂದು ಕಡೆ ಅಜ್ಜನಿಗೆ ಕೊಟ್ಟ ಮಾತು, ಇನ್ನೊಂದೆಡೆ ಮುಂದೆ ಓದಬೇಕೆನ್ನುವ ಹಂಬಲ. ಕೋನೆಗೂ ಸರ್ವಸಮ್ಮತದ ನಿರ್ಧಾರ ಹೊರ ಬಂತು, ಬೆಂಗಳೂರಿಗೆ ಹೋಗಿ ಚಿಕ್ಕಪ್ಪನ ಮನೆಯಲ್ಲಿ ಇಂಜಿನಿಯರಿಂಗ್ ಕಲಿಕೆ ಮಾಡುವುದಾಗಿತ್ತು. ನನಗೆ ಬೆಂಗಳೂರು ಹೊಸತು, ಒಂದೇ ತರಹ ಕಾಣಿಸುವ ಗಲ್ಲಿ ರಸ್ತೆಗಳು, ಮನೆಗಳು ಅದೇ ತರಹ ಜನಗಳು. ಒಟ್ಟಾರೆ ಅದೊಂದು ವಿಸ್ಮಯಲೋಕ ಅನ್ನಿಸುವಂತಿತ್ತು, ಹಳ್ಳಿಯಿಂದ ಪಟ್ಟಣಕ್ಕೆ ಬಂದ ನನ್ನಂತಹ ಜನರಿಗೆ ಇದು ಸರ್ವೇಸಾಮಾನ್ಯ. ಮಂಜುನಾಥನಗರದಲ್ಲಿ ನನ್ನ ಚಿಕ್ಕಪ್ಪನ ಮನೆ ಇದೆ, ಮೊದಲನೇ ಮಹಡಿಯಲ್ಲಿರುವ ಎರೆಡು ವಿಶಾಲವಾದ ಕೊಟಡಿಯಿರುವ ಸುಂದರ ಮನೆ ಅದಾಗಿತ್ತು. ಚಿಕ್ಕದಾದ ದೇವರ ಕೋಣೆ ಅದರ ಎದರುಗಡೆ ವಿಶಾಲವಾದ ಜಾಗ, ಟಿವಿ,ಸೋಫಾ,ಕಪಾಟು,ಕಂಪ್ಯೂಟರ್ ಇನ್ನಿತರ ಗ್ರಹೋಪಯೋಗಿ ವಸ್ತುಗಳ ತಾಣ ಅದಾಗಿತ್ತು. ಬಿ.ಮ್.ಸ್ ಇಂಜಿನಿಯರಿಂಗ್ ಕಾಲೇಜ್ ಗೆ ಸೇರಿದೆ, ಅಲ್ಲೇ ನನ್ನ ಅತ್ತೆಯ ಮಗ ಶೇಷ ಪ್ರಸಾದ್ ಮಯ್ಯ ಓದುತ್ತಾಯಿದ್ದಿದ್ದ, ಅದೇ ನನ್ನ ಧೈರ್ಯಕ್ಕೆ ಗಜಬಲ ಸಿಕ್ಕಂತಾಗಿತ್ತು ಅವನ ಕೆಲ ಸ್ನೇಹಿತರ ಪರಿಚಯವೂ ಆಗಿತ್ತು .( ಕಾಲೇಜ್ ಜೀವನವನ್ನು ಪ್ರತ್ಯೇಕವಾಗಿ ಬರೆಯುವ ಇರಾದೆ ನನ್ನದು) ಕೊನೆಗೆ ಕುಂದಾಪುರ ಕನ್ನಡ ಮಾತ್ರ ಮಾತನಾಡಲು ಬಲ್ಲವನಾಗಿದ್ದ ನನಗೆ ಅಸಂಖ್ಯಾತ ಗೆಳೆಯರು ಪರಿಚಿತರಾದರು, ಅವರ ಜೊತೆ ಸಂಬಾಷಣೆ ಮಾಡುತ್ತಾ ಮಾಡುತ್ತಾ ಬೆಂಗಳೂರು ಜನರಂತೆ ಮಾತನಾಡಲು ಸಾಧ್ಯವಾಯಿತು.




ಊರಿನಲ್ಲಿ ಸಂಜೆಯಾಗುತ್ತಿದ್ದಂತೆ ಕ್ರಿಕೆಟ್ ಆಡುತ್ತಾಯಿದ್ದಿದ್ದೆ, ಬೆಂಗಳೂರಿಗೆ ಬಂದಮೇಲೆ ಅದು ಮರೀಚಿಕೆ ಆಯಿತು. ಯಾಂತ್ರಿಕ ಜೀವನ ಶೈಲಿ ನನಗೆ ಸ್ವಲ್ಪ ಕಸಿವಿಸಿ ಆನ್ನಿಸ್ತಾಯಿತ್ತು. ಮೊದಮೊದಲು ಹಳೆಯದನ್ನು ಯೋಚಿಸುತ್ತಿದ್ದ ಮನಸ್ಸು ಆನಂತರದ ದಿನದಲ್ಲಿ ಸಂಪೂರ್ಣವಾಗಿ ಪರಿವರ್ತನೆ ಆಯಿತು. ಚಿಕ್ಕಪ್ಪನ ಮಕ್ಕಳ ಜೊತೆ ಆಗೊಮ್ಮೆ ಈಗೊಮ್ಮೆ ಆಡುತ್ತಾಯಿದ್ವಿ. ಒಮ್ಮೊಮ್ಮೆ ನಾವೆಲ್ಲಾ ಕ್ಯಾರಂ ಇಲ್ಲಾ ಪಗಡೆ ಆಡ್ತಾಯಿದ್ದಿದ್ವಿ. ಚಿಕ್ಕಮ್ಮನೂ(ಚಿಕ್ಕಿ) ನಮಗೆ ಸಾತ್ ಕೊಡ್ತಾಯಿದ್ದಿದ್ರು, ಚಿಕ್ಕಪ್ಪ ಪಗಡೆ ಆಡೋಕೆ ಸ್ವಲ್ಪ ಕಡಿಮೆ ಬರ್ತಾಯಿದ್ದದ್ದು. ಅವರಿಗೆ ಕೆಲಸದ ಒತ್ತಡ ಜಾಸ್ತಿ ಇರುತಿತ್ತು. ನಾನು ಬೆಂಗಳೂರಿಗೆ ಬಂದಾಗ ಚಿಕ್ಕಪ್ಪನ ಮಕ್ಕಳು ಸ್ವಲ್ಪ ಚಿಕ್ಕವರಿದ್ದಿದ್ರು, ಚಿಕ್ಕಪ್ಪ ಅಂದ್ರೆ ನನಗೆ ಅಷ್ಟೊಂದು ಸಲಿಗೆ ಇರಲಿಲ್ಲ.. ಇವಾಗ್ಲೂ ಸ್ವಲ್ಪ ಕಡಿಮೇನೆ, ಚಿಕ್ಕಪ್ಪನ ಏನೆ ಕೆಳಬೇಕಾದ್ರು ನನ್ನ ಮಾಧ್ಯಮ "ಚಿಕ್ಕಿ". ನನಗೆ ಕಾಲೇಜ್ ಫೀಸ್ ಕಟ್ಟೋಕೆ ನಾನು ಮೊದಲು ಚಿಕ್ಕಿ ಹತ್ರಾನೆ ಅಪ್ಲಿಕೇಶನ್ ಹಾಕ್ತ ಇದ್ದಿದ್ದೆ. ಚಿಕ್ಕಿ ನನಗೆ ಮೊದಮೊದಲು ಅಷ್ಟೊಂದು ಸಲಿಗೆ ಇರಲಿಲ್ಲ. ದಿನ ಕಳೆದಂತೆ ಚಿಕ್ಕಿ ತುಂಬ ಆತ್ಮೀಯರಾಗಿದ್ರು. ಅದೆಷ್ಟೋ ಬಾರಿ ಜಗಳ ಆಡಿದ್ವಿ ಆಮೇಲೆ ಫ್ರೆಂಡ್ಸ್ ಆಗೋದು ಸ್ವಲ್ಪ ಮುನಿಸ್ಕೊಂಡಿರೋದು, ಮರುದಿನ ಏನು ಆಗಿಲ್ಲ ಅನ್ನೋತರ ಇರ್ತಾ ಇದ್ವಿ. ಇನ್ನು ನೆನಪಿರೋದೆನಂದ್ರೆ ಚಿಕ್ಕಿ ಅಡಿಗೆ ಮನೇಲಿ ಕೆಲಸ ಮಾಡ್ತಿರ್ಬೇಕದ್ರೆ ಹಿಂದಿನಿಂದ ಹೋಗಿ ಕುತ್ತಿಗೆನೋ,ಕಣ್ಣೋ ಮುಚ್ಚಿ ಹೆದರಿಸ್ತಾಯಿದ್ದೆ. ಅಡಿಗೆ ವಿಷಯದಲ್ಲಿ ಚಿಕ್ಕಿನ ಮೀರಿಸೋ ಗೃಹಿಣಿ ಯಾರು ಇಲ್ಲಾ.. ಏನೆ ಹೊಸರುಚಿ ಕಲಿತರು ಅದು ಅಷ್ಟೊಂದು ಅಚ್ಚುಕಟ್ಟಾಗಿ ಮಾಡ್ತಾಯಿದ್ರು, ಎಲ್ಲಾದರು ಸ್ವಲ್ಪ ರುಚಿ ಚೆನ್ನಾಗಿ ಬರ್ಲಿಲ್ಲ ಅಂದ್ರೆ ಅದನ್ನೇ ಯೋಚಿಸ್ತಾ ಇರೋರು, ಮತ್ತೊಮ್ಮೆ ಅಂದ್ಕೊಂಡದನ್ನ ಮಾಡಿ ಕುಶಿ ಪಡ್ತಾಯಿದ್ರು. ಪರಿಪಕ್ವತೆ ಅಂತ ಕರೆಯೋದು ಇದನ್ನೇ, ನಾನು ಯಾವಾಗ್ಲೂ ಅದರ ರುಚಿ ನೋಡೋ ಅದೃಷ್ಟವಂತ, ನನಗಂತೂ ಏನ್ ಮಾಡಿದ್ರು ರುಚಿಯಾಗೆ ಇರ್ತಾಯಿತ್ತು. ಯಾಕೆ ಇವರು ಎಷ್ಟೊಂದು ಕೊರಗುತ್ತಾರೆ ಅನ್ನಿಸೋದು.

ನನಗೆ ಬೆಳಿಗ್ಗೆ ೭ ಗಂಟೆಗೆ ಕಾಲೇಜ್ ಶುರು ಆಗ್ತಾಯಿತ್ತು, ಏನಿಲ್ಲ ಅಂದ್ರು ಬೆಳಿಗ್ಗೆ ೬:೩೦ಕ್ಕೆ ಹೊರಡಬೇಕಿತ್ತು, ದಿನಾ ಹೋಗಿ ಚಿಕ್ಕಿ ನಿದ್ರೆ ಹಾಳ್ ಮಾಡ್ತಾಯಿದ್ದೆ, ಪಾಪ ನಿದ್ದೆಯಿಂದ ಎದ್ದು ತಿಂಡಿ ಮಾಡಿ ಕೊಡೋವುರು. ಒಂದು ದಿನಾನು ಆಗಲ್ಲ ಅಂತ ಹೇಳಿಲ್ಲ. ಭಾನುವಾರ ಬಂತು ಅಂದ್ರೆ ಅವ್ರಿಗೆ ಕುಶಿ. ಆದ್ರೆ ಚಿಕ್ಕಪ್ಪನ ದಿನಚರಿನೆ ಬೇರೆ ಬೇಗ ಎದ್ದು ವಾಕಿಂಗ್ ಹೋಗೋರು. ಮನೇಲಿ ಪ್ರಾಣಾಯಾಮ ಮಾಡೋದು, ದಿನಪತ್ರಿಕೆಯ ಪ್ರತಿಯೊಂದು ಸಾಲನ್ನು ಓದುತ್ತಾ ಇದ್ರು. ಅವ್ರಿಗೆ ಪುಸ್ತಕ ಓದೋದ್ರಲ್ಲು ತುಂಬಾ ಆಸಕ್ತಿ, ಇವಾಗ ಅವ್ರ ಮನೇಲಿ ಒಂದು ಚಿಕ್ಕ ಗ್ರಂಥಾಲಯವಿದೆ. ಚಿಕ್ಕಪ್ಪ ಚಿಕ್ಕಮ್ಮಂದು ಸುಖಿಸಂಸಾರ, ಇಬ್ಬರಲ್ಲೂ ತುಂಬಾ ಅನ್ಯೋನ್ಯತೆ, "ಗ್ರಹಿಣಿ ಗ್ರಹಮುಚ್ಯತೆ" ಅಂತಾರಲ್ಲ ಅದಕ್ಕೆ ನನ್ನ ಚಿಕ್ಕಿ ಹೇಳಿ ಮಾಡಿಸಿದಂತಿದೆ. ಊರಿಂದ ಯಾರೇ ಬರಲಿ ಅವರ ಆತಿಥ್ಯ ಸ್ವಲ್ಪಾನು ಬೇಜಾರಿಲ್ಲದೆ ಮಾಡ್ತಾರೆ ಇವಾಗ್ಲೂ ಅಷ್ಟೇ. ಒಂದು ವಿಷಯ ಹೇಳಲೇಬೇಕು ಚಿಕ್ಕಿಗೆ ತುಂಬಾನೆ ತಲೆನೋವು, ಯಾವಗ್ಲಂದೆ ಆವಾಗ ಬರೋದು. ನಾಮ್ಮ ಹತ್ರ ಮಾತ್ರೆ ತರೋಕೆ ದುಡ್ಡು ಕೊಟ್ಟು ಕಲಿಸೋಳು. ಅವರನ್ನ ಯಾರಾದ್ರೂ ನೋಡಿದ್ರೆ ಏನು ಆಗಿಲ್ಲ ಅನ್ನೋತರಹ ನಟಿಸೋಳು ಆದ್ರೆ ಪಾಪ ಅದೆಷ್ಟು ಸಂಕಟ ಪಡ್ತಾಯಿದ್ರು ಅಂತ ನಮಗೆ ಗೊತ್ತು. ಅವ್ರು ಒಂದು ತರಹ MBBS ಮಾಡದೆಯಿರೋ ಡಾಕ್ಟರ. ಯಾರಾದ್ರೂ ಒಂದು ಮಾತ್ರೆ ಇದೆ ಅಂದ್ರೆ ಕಿವಿ ನೆಟ್ಟಗೆ ಮಾಡ್ಕೊಂಡು ಕೇಳೋರು, ಅರ್ಥಾತ್ ಅಷ್ಟು ಕುತೂಹಲ.

ಪಾನಿ ಪೂರಿ,ಮಸಾಲ್ ಪೂರಿ ಅಂದ್ರೆ ಒಂದು ಮಾರು ದೂರ ಓಡಿ ಹೋಗ್ತಾಯಿದ್ದ ನಾನು ಕಾಲಕ್ರಮೇಣ ಬೆಂಗಳೂರಿನ ಶೈಲಿಗೆ ಬದಲಾದೆ. ಮೊದಮೊದಲು ಇರುಳ್ಳಿ,ಬೆಳ್ಳುಳ್ಳಿ ತಿನ್ನುತ್ತಾಯಿರಲಿಲ್ಲ, ಮನೆಲು ಅಷ್ಟೇ ನನಗೆ ಬೇರೆ ಪದಾರ್ಥ ತೆಗೆದಿಡಬೇಕಿತ್ತು. ಆಮೇಲೆ ಒಮ್ಮೆ ಅದರ ರುಚಿ ನಾಲಿಗೆಗೆ ತಿಳಿದಿರಬೇಕು, ಮತ್ತೆ ಎಂದೂ ಬೇಡ ಅನ್ನುತ್ತಾಯಿಲ್ಲ ನೋಡಿ. ಚಿಕ್ಕಪ್ಪ ಸಂಜೆ ಮನೆಗೆ ಬಂದಾಗ ಅವರ ಮನಸ್ಥಿತಿ ನೋಡಿ ಹೊರಗೆ ಹೋಗೋ ಪ್ರೊಗ್ರಾಮ್ ತಯರಾಗ್ತಯಿತ್ತು. ನಾನು ಬಂದ ಹೊಸತರಲ್ಲಿ ಹೋಗ್ತಾ ಇರಲಿಲ್ಲ ಆಮೇಲೆ ನಿದಾನವಾಗಿ ಅಭ್ಯಾಸ ಅಗೋಯಿತು. ಭಸವೇಶ್ವರ ನಗರದ ಪಾನಿ ಪೂರಿ ಅಂಗಡಿ,ಬೆಣ್ಣೆ ದೋಸೆ ಅಂಗಡಿ ಇನ್ನು ಹಲವಾರು ಹೋಟೆಲ್ ರುಚಿ ನೋಡಿದೆ. ಏನೆ ಹೇಳಿ ಅಲ್ಲಿಂದ ಇಂದಿನ ತನಕ ಅದೆಷ್ಟೋ ಹೋಟೆಲ್ ಊಟ ತಿಂಡಿ ಮಾಡಿದ್ದೇನೆ. ಆದರೆ ಚಿಕ್ಕಿ ಕೈ ಊಟಕ್ಕಿಂತ ಯಾವುದು ರುಚಿಯಿಲ್ಲ. ನಮ್ಮ ಮನೆಗೆ ಯಾರಾದ್ರೂ ಬಂದ್ರೆ ಮುಗಿತು, ಬಗೆ ಬಗೆ ತಿಂಡಿ ತಿನಿಸು ಮನೆಯಲ್ಲೇ ತಯಾರಾಗ್ತಾಯಿತ್ತು.

ಒಮ್ಮೆ ನನ್ನ ಹುಟ್ಟಿದಹಬ್ಬ, ಮನೇಲಿ ಯಾರಿಗೂ ಗೊತ್ತಿಲ್ಲ, ಸಂಜೆ ಅದು ಹೇಗೋ ಚಿಕ್ಕಿಗೆ ಗೊತ್ತಾಯಿತು, ಎಲ್ಲೊ ಹೊರಗೆ ಹೋಗೋಕೆ ಇದ್ದಿತ್ತು, ನಾನೊಬ್ಬನೇ ಮನೇಲಿ ಊಟ ಮಡ್ಬೇಕಾಗಿರೋದಾಗಿತ್ತು. ಹೊರಡೋಕೆ ಸ್ವಲ್ಪ ಮುಂಚೆ ಗೊತ್ತಾದ್ರು, ಹಾಗೆ ಹೋಗೋಕೆ ಮನಸಾಗಿಲ್ಲ. ಬೇಳೆ ಪಾಯಸ ಮಾಡಿದ್ರು. ಅದು ಚೆಂದಾಗಿಲ್ಲ( ಬೇಳೆ ಬುಡ ಸುಟ್ಟಿತ್ತು) ಅಂತ ಅವ್ರೆ ಬೇಜಾರ್ಮಡ್ಕೊಂಡು ಹೋಗಿದ್ರು. ಚಿಕ್ಕಿಗೆ ಹಾಲು ಕಾಯಿಸೋದು ಅಂದ್ರೆ ತುಂಬಾ ಕಷ್ಟದ ಕೆಲೆಸ, ದಿನಕ್ಕೆ ಒಮ್ಮೆಯಾದರು ಹಾಲು ಒಕ್ಕೊದು ಮಾಮೂಲಿ. ಒಂದೇ ಕಡೆ ಸುಮ್ಮನೆ ನಿಲ್ಲೋ ಜಾಯಮಾನವಲ್ಲ ಅವರದ್ದು. ಮುಂದಿನ ವರ್ಷದ ಹುಟ್ಟು ಹಬ್ಬ ನನಗೆ ತಿಳಿದಂತೆ ತುಂಬಾನೆ ವಿಜ್ರಂಭಣೆಯಿಂದಾಯಿತು. ಶಾವಿಗೆ, ಕಾಯಿ ಕಡಬು,ಉಂಡ್ಳುಕಾಯಿ, ಬೋಂಡ ಮತ್ತು ಪಾಯಸ ಮಾಡಿದ್ರು.ಹಬ್ಬ ಹರಿದಿನಗಳು ಬಂದ್ರೆ ನಮಗೆ ಸಡಗರ. ಏನು ವಿಶೇಷ ಮಾಡ್ತಾರೆ ಅನ್ನೋ ಕುತೂಹಲ, ಒಮ್ಮೊಮ್ಮೆ ಏನು ಹೆಸರು ಅಂತ ನಿರ್ಧಾರವಾಗೋದು ತಿನ್ನೋ ಸಮಯ ಬಂದಾಗ. ( ಹ ಹ ಹ ). ದೀಪಾವಳಿ ಆಚರಣೆ ಎಂದೂ ಮರೆಯದ ನೆನಪು. ನಮಗೆಲ್ಲ ಹೊಸಬಟ್ಟೆ ಕೊಡಿಸೂರು. ಬೆಳಿಗ್ಗೆ ಬೇಗ ಅಭ್ಯಾಂಗ ಸ್ನಾನ ಆಗೋದು, ನಮಗೆಲ್ಲ ಎಣ್ಣೆ ಹಚ್ಚಿ ಬೆನ್ನುಜ್ಜಿ ಸ್ನಾನ ಮಾಡಿಸೋರು. ಚಿಕ್ಕಮ್ಮನ ವಾತ್ಸಲ್ಯಕ್ಕೆ ಸಾಟಿಯಿಲ್ಲ. ಲಕ್ಷಿ ಪೂಜೆ ದಿನ ಚಿಕ್ಕಪ್ಪನ ಆಫೀಸ್ ಪೂಜೆ. ಮಧ್ಯಾಹ್ನ್ನ ಮನೇಲಿ ಗಡಜ್ ಊಟ, ಸಂಬಂದಿಕರೆಲ್ಲರನ್ನು ಕರೆಯುತ್ತಿದ್ರು. ಇವಾಗ್ಲೂ ಅಷ್ಟೇ.

ಸಂಜೆಯ ಸಮಯ ಸವಿಯಾದ ಟೀ ಕುಡಿಯುತ್ತ ಚಿಕ್ಕಿ ಮತ್ತೆ ಸೋದರತ್ತೆ ಹತ್ರ ಹರಟೆ ಹೊಡಿತಾಯಿದ್ದೆ. ನನಗೋ ಕಾಲೇಜ್ ಲಿ ನಡಿಯೋ ಪ್ರತಿಯೊಂದು ಘಟನೆ ಹೇಳೋಕೆ ಆಸಕ್ತಿ. ನಾನು ತಿಳಿದಂತೆ ನನ್ನ ಗೆಳೆಯರೆಲ್ಲರ ಬಗ್ಗೆನು ಚಿಕ್ಕಿಗೆ ಗೊತ್ತು. ನಾನು ಏನಾದ್ರು ತಪ್ಪು ಮಾಡಿದ್ರೆ ನನ್ನ ತಿದ್ದಿದ್ದು ಅವ್ರೆ ಅಂದ್ರೆ ತಪ್ಪಲ್ಲ. ನನಗೆ ಏನಾದ್ರು ನಿರ್ಧಾರ ತಗೊಳ್ಳೋಕೆ ಗೊಂದಲವಾದ್ರೆ ಚಿಕ್ಕಿನೆ ಜಡ್ಜಮ್ಮ. ಕೆಲವೊಮ್ಮೆ ಮಾವ ಬೇಗ ಬರೋರು, ಅವರ ಮನೇನು ಹತ್ರಾನೆ ಇದ್ದಿತ್ತು. ಮಾವ ಬಂದ್ರೆ ಹಳೆಕಾಲದಿಂದ ಕಥೆ ಶುರು ಮಾಡೋರು, ಸಮಯ ಹೋಗೋದೇ ತಿಳಿತಾಯಿರಲಿಲ್ಲ.ಕ್ರಿಕೆಟ್,ರಾಜಕೀಯ ಮತ್ತು ದೈನಂದಿನ ಜೀವನದ ಸಮಾಚಾರ ನಮಗೆ ಚರ್ಚೆಯ ವಿಷಯ.

ನಾನು ಮೊದಲಬಾರಿ ತಿರುಪತಿಗೆ ಭೇಟಿ ಕೊಟ್ಟಿದ್ದು ಅದೇ ಸಮಯದಲ್ಲಿ, ಚಿಕ್ಕಿಯ ಹರಕೆ ಇತ್ತು ಬೆಟ್ಟ ಹತ್ಕೊಂಡೆ ಹೋಗೋದು ಅಂತ. ಚಿಕ್ಕಿ ಯಾವಾಗ್ಲೂ ಹರಕೆ ಹೊರೋದ್ರಲ್ಲಿ ಮುಂದೆ. ನಾವೆಲ್ಲಾರು ನಡ್ಕೊಂಡು ಹೋಗಿದ್ದು. ಅದೊಂದು ಅವಿಸ್ಮರಣೀಯ ದಿನ. ಮೇಲೆ ವೆಂಕಟೇಶನ ದರ್ಶನ ಮಾತ್ರ ತುಂಬಾ ದುಸ್ತರವಾಗಿತ್ತು, ೬ ಗಂಟೆ ಸಾಲಲ್ಲಿ ನಿಲ್ಲೋದ್ರಲ್ಲಿ ನಾವೆಲ್ಲಾ ಸುಸ್ತು. ಇನ್ನೊಮ್ಮೆ ಭನಶಂಕರಿ ದೇವಸ್ತಾನಕ್ಕೆ ಹರಕೆ ತೀರಿಸೋಕೆ ಹೋಗಿದ್ವಿ. 205 ನಂಬರ್ ಬಸ್ಸಲ್ಲಿ ಹೋಗಿ ದರ್ಶನ ಮಾಡಿ, ಪೂಜೆ ಕೊಟ್ವಿ, ವಾಪಸ್ ನಾನು ಬೇರೆ ಎಲ್ಲೊ ಹೋಗಬೇಕಿತ್ತು, ಯಾವತ್ತು ಒಬ್ರೇ ಬಸ್ಸಲ್ಲಿ ಹೋಗದ ಚಿಕ್ಕಿ ಆವತ್ತು 205a ನಂಬರ್ ಬಸ್ ಹತ್ತಿ ಹೊರಟರು, ಅವರ ದುರಾದ್ರುಷ್ಟ ಅದು ಬೆಂಗಳೂರಿಗೆ ಒಂದು ಸುತ್ತು ಹಾಕಿ ಬಂತು. ನನಗೆ ತುಂಬಾ ಬೇಜಾರಾಗಿತು. ನಾನು ಸ್ವಲ್ಪ ವಿಚಾರಿಸಬಹುದಿತ್ತು ಅಂತಾ ಆಮೇಲೆ ಕಲಿತೆ.

ನನಗೆ ಇಂಜಿನಿಯರಿಂಗ್ ಮುಗಿದು Perot systems (ಡೆಲ್ ಸೇರ್ವಿಸೆಸ್) ಕಂಪನಿಯಲ್ಲಿ ಕೆಲಸ ಸಿಕ್ಕಿತು. ಆಫೀಸ್ ಹತ್ರಾನೆ ಮನೆ ಬದಲಾಯಿಸೋ ಚಿಂತನೆಗಳು ಪ್ರಾರಂಬವಾದವು. ಇಷ್ಟೊಂದು ಸುಮಧುರ ನೆನಪುಗಳ ಗೂಡಿಂದ ಹೊರಹೋಗಲು ಯಾವ ಹಕ್ಕಿಯೂ ಇಷ್ಟಪಟ್ಟಿರಲಿಕ್ಕಿಲ್ಲ.ಸಿಹಿಯಾದ ಜೀನುಗೂಡಿಂದ ಹಾರಿ ಹೋಗುವ ಕಾಲ.ಬ್ರಹ್ಮಚಾರಿಯ ಹೊಸ ಕುಟೀರದ ಉದ್ಗಾಟನೆ. ಸಿದ್ದಾಪುರದಲ್ಲಿ ೩ನೆ ಅಂತಸ್ತಿನಲ್ಲಿ ಒಂದು ಚಿಕ್ಕ ಮನೆ ಹುಡುಕಿದೆವು. ನೋಡ ನೋಡುತಿದ್ದಂತೆ ಮನೆಗೆ ಹೋಗುವ ದಿನ ಬಂದಿತು, ಅಲ್ಲೋಲ ಕಲ್ಲೋಲವಾದ ಮನಸ್ಸು ಕಲ್ಲಾಗಿ ಪರಿವರ್ತನೆಯಾಗ ಬಯಸಿತು, ಎಷ್ಟಾದರೂ ಅನ್ನದ ಋಣ, ರಕ್ತಸಂಬಂದದ ಆಕರ್ಷಣೆ. ಮನವು ತಾ ಬರಲಾರೆ ಅನ್ನಲು ಕಣ್ಣು ತಾ ಒಂದುಹನಿ ಸಿಂಚನ ಮಾಡಿರಲು. ಹೋರಾಟ ಮಾಡಿ ಬದುಕುವ ಆಲೋಚನೆಗೆ ಹಿನ್ನಡೆ.  ಮನೆಯಿಂದ ನನ್ನ ಸಾಮಾನುಗಳ ಹೊತ್ತು ಹೊರಡುವ ಸಮಯ. ನಾನು ಚಿಕ್ಕಪ್ಪ,ಚಿಕ್ಕಮ್ಮನಿಗೆ ನಮಸ್ಕರಿಸಿ ಹೊರಟೆ. ನಿಮ್ಮ ಆಶೀರ್ವಾದದ ಬಲವೊಂದಿದ್ದರೆ ಆಶಾ ಗೋಪುರವ ಕಟ್ಟೇನು ಅನ್ನುವ ಛಲ. ಬಾಗಿಲ ಬಳಿ ನಿಂತು ದೂರದ ಬೆಟ್ಟವ ನೋಡಿ ನಾ ಬರುವೆ ಅನ್ನಲು ಹೇಳಲಾಗದ ನೋವು. ಅತ್ತ ಚಿಕ್ಕಿ ನನ್ನ ಅಕ್ಕನಿಗೆ ಫೋನ್ ಮಾಡಿ ನನಗೆ ದೈರ್ಯ ತುಂಬಲು ಹೇಳ್ತಾ ಇದ್ರು. ಮದ್ಯದಲ್ಲಿ ಚಿಕ್ಕಿಯ ದ್ವನಿ ನಿಂತಿತು ಕಣ್ಣಿನಲ್ಲಿ ಮೌನವಾಗಿ ನರ್ಮದೆ ಸುರಿಯುತ್ತಿದ್ದಿದಳು. ನಾಲ್ಕು ವರ್ಷ ತನ್ನ ಮಕ್ಕಳಂತೆ ನೋಡಿಕೊಂಡ ಹೃದಯ, ಹೋಗುವುದು ಮೊದಲೇ ತಿಳಿದಿದ್ದರೂ ಸಹಿಸಲಾರದ ವೇದನೆ. ನಿಮಿಶಾರ್ದದಲಿ ಬಂದಿರಬಹುದಾದ ಯೋಚನಾ ಲಹರಿ ಆ ನಾಲ್ಕು ವರುಷದ ಸಿಹಿ ಕಹಿ ನೆನಪನ್ನ ಮೇಳೈಸಿದೆ. ಇತ್ತ ಹೊರಟ ನಾನು "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನನ್ನನು" ಅಂತ ಕಣ್ಣನ್ನು ತೇವ ಮಾಡಿಕೊಂಡು ಬಾರವಾದ ಹೆಜ್ಜೆಯನಿಟ್ಟು ಮುಂದೆ ಸಾಗಿದೆ.ನನ್ನೆರಡು ಕಾಲುಗಳು ನೀ ಮುಂದೆಸಾಗು ಅಂತ ಕಿತ್ತಾಡುತ್ತಿವೆ, ಪ್ರತಿದಿನ ಸಾಗುವ ರಸ್ತೆಯು ಇಂದು ನನ್ನ ಮೌನಕ್ಕೆ ನೊಂದು ಕೊರಗುತ್ತಿದೆ. ತಂಪುಗಾಳಿಯು ನನ್ನನ್ನು ಬಿಗಿದಪ್ಪಿ ಸಂತೈಸುತ್ತಿದೆ. ಸೂರ್ಯ ತಾ ನೋಡಲಾರದೆ ಮೋಡದಲ್ಲಿ ಮರೆಯಾಗಿದ್ದಾನೆ.

ನನ್ನಿಂದ ಅದೆಷ್ಟೋ ಬಾರಿ ನೊಂದು, ಆಪಾದನೆ ಕೇಳಿರುವ ತಾಯಿ ಹೃದಯ. ನನಗಾಗಿ ಒಮ್ಮೆ ಮಿಡಿದಿರುವುದನ್ನ ಗಮನಿಸಿ ಆನಂದ ಪಡಲೇ ? ಇಲ್ಲ ನನ್ನಿಂದ ಒಂದು ಹನಿ ಕಣ್ಣೀರು ಸುರಿಯಿತಲ್ಲಾ ಅಂತ ವೇದನೆ ಪಡಲೇ ? ನನಗೆ ಕೆಲವು ಸಂದರ್ಭದಲ್ಲಿ ಅನ್ನಿಸೋದು, ಎಷ್ಟೊಂದು ಸಹಾಯ ಮಾಡಿದ, ಇಂದು ನಾನು ಈ ಹಂತಕ್ಕೆ ಬರೋಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಿದವರಿಗೆ ಏನಾದ್ರು ಕೊಡಬೇಕು ಅಂತ. ಯೋಚಿಸಿ ಯೋಚಿಸಿ ಸಮಯ ಸಂದಿಸಿದೆ ಹೊರತಾಗಿ ಯಾವುದೇ ಪ್ರಯೋಜನವಾಗಿಲ್ಲ. ಶಿಲೆ ತಾನು ಶಿಲ್ಪವಾಗಿ ಮಾರ್ಪಡಲು ಶಿಲ್ಪಿ ಕಾರಣನಾಗುತ್ತಾನೆ ಇಲ್ಲ ಅಂದಿದ್ರೆ ಅದೊಂದು ಬರಿ ಕಲ್ಲಾಗಿರುತ್ತಿತ್ತು. ಶ್ರೇಷ್ಠತೆ ಶಿಲ್ಪಿಗೆ ಸೇರಬೇಕು.

:- Sridhar Aithal D

4 comments: